ADVERTISEMENT

ತಮಿಳುನಾಡು, ಪುದುಚೇರಿಯತ್ತ ‘ನಿವಾರ್’ ಚಂಡಮಾರುತ

ಭಾರಿ ಮಳೆ-ಪ್ರವಾಹ ಸಾಧ್ಯತೆ; ಪ್ರಧಾನಿಯಿಂದ ರಾಜ್ಯ ಸರ್ಕಾರಗಳಿಗೆ ನೆರವಿನ ಭರವಸೆ

ಪಿಟಿಐ
Published 24 ನವೆಂಬರ್ 2020, 20:52 IST
Last Updated 24 ನವೆಂಬರ್ 2020, 20:52 IST
ಚೆನ್ನೈನ ಜಲಾವೃತ ರಸ್ತೆಯೊಂದರಲ್ಲಿ ಮಂಗಳವಾರ ಜನರು ಸಾಗಿದರು--- –ಪಿಟಿಐ ಚಿತ್ರ
ಚೆನ್ನೈನ ಜಲಾವೃತ ರಸ್ತೆಯೊಂದರಲ್ಲಿ ಮಂಗಳವಾರ ಜನರು ಸಾಗಿದರು--- –ಪಿಟಿಐ ಚಿತ್ರ   

ಚೆನ್ನೈ: ಬಂಗಾಳ ಕೊಲ್ಲಿಯ ನೈರುತ್ಯ ಭಾಗದಲ್ಲಿ ಉಂಟಾಗಿದ್ದ ವಾಯುಭಾರ ಕುಸಿತವು ಮಂಗಳವಾರ ಚಂಡಮಾರುತದ ಸ್ವರೂಪ ಪಡೆದಿದೆ. ಬುಧವಾರದ ಸಂಜೆ ವೇಳೆಗೆ ತೀವ್ರ ಚಂಡಮಾರುತವಾಗಿ ಬದಲಾಗಲಿದ್ದು, ಚೆನ್ನೈ ಮತ್ತು ಪುದುಚೇರಿಯನ್ನು ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

ಮಂಗಳವಾರವೇ ತಮಿಳುನಾಡು ಮತ್ತು ಪುದುಚೇರಿಯ ಹಲವೆಡೆ ಮಳೆಯಾಗಿದೆ. ಚೆನ್ನೈನಲ್ಲಿ ಭಾರಿ ಮಳೆಯಾಗಿದ್ದು, ಹಲವು ರಸ್ತೆಗಳು ಮತ್ತು ತಗ್ಗು ಪ್ರದೇಶಗಳು ಈಗಾಗಲೇ ಜಲಾವೃತವಾಗಿವೆ.

ತಮಿಳುನಾಡಿನ ಹಲವು ಜಲಾಶಯಗಳು ಭರ್ತಿಯಾಗಿವೆ. ಚಂಬರಕ್ಕಂಅಣೆಕಟ್ಟಿನ ಒಳಹರಿವನ್ನು ಗಮನಿಸಲಾಗುತ್ತಿದೆ. ಬುಧವಾರಭಾರಿ ಮಳೆಯಾಗುವ ಕಾರಣ ತಗ್ಗಿನ ಪ್ರದೇಶಗಳಲ್ಲಿ ಪ್ರವಾಹದ ಸ್ಥಿತಿ ಉಂಟಾಗಬಹುದು.

ADVERTISEMENT

ಚಂಡಮಾರುತದ ಜತೆಗೆ ತೀವ್ರ ಗಾಳಿ ಬೀಸುವ ಕಾರಣ ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳುವ ಹಾಗೂ ವಿದ್ಯುತ್ ತಂತಿಗಳು ತುಂಡಾಗುವ ಸಾಧ್ಯತೆ ಇದೆ. ಮನೆಗಳಿಗೆ ಹಾಕಿರುವ ತಗಡಿನ ಶೀಟುಗಳು ಹಾರಿಹೋಗುವ ಅಪಾಯವಿದೆ. ಆದರೆ ಈ ಎಲ್ಲಾ ಪರಿಸ್ಥಿತಿಗಳನ್ನು ಎದುರಿಸಲು ಸರ್ಕಾರದ ವಿವಿಧ ಸಂಸ್ಥೆಗಳು ಸಜ್ಜಾಗಿವೆ ಎಂದು ಮೂಲಗಳು ಹೇಳಿವೆ.

ಭಾರಿ ಸಿದ್ಧತೆ
* 130-140 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ
* ಚಂಡಮಾರುತದ ವೇಳೆ ಸಮುದ್ರದಲ್ಲಿ2 ಮೀಟರ್ ಎತ್ತರದ ಅಲೆಗಳು ಏಳಬಹುದು
* ತಮಿಳುನಾಡು, ಪುದುಚೇರಿ, ಆಂಧ್ರಪ್ರದೇಶ ಮತ್ತು ಕೇರಳದಲ್ಲಿ50 ಎನ್‌ಡಿಆರ್‌ಎಫ್ ತಂಡಗಳು ಸನ್ನದ್ಧ
* ಚಂಡಮಾರುತದ ವೇಳೆ ಜನರ ಓಡಾಟವನ್ನು ತಡೆಯುವ ಉದ್ದೇಶದಿಂದ ಪುದುಚೇರಿ ಸರ್ಕಾರವು ನಿಷೇಧಾಜ್ಞೆ ಜಾರಿ ಮಾಡಿದೆ. ಮಂಗಳವಾರ ರಾತ್ರಿ 9ರಿಂದ ಗುರುವಾರ ಬೆಳಿಗ್ಗೆ 9ರವರೆಗೆ ಇದು ಅನ್ವಯ
* ತಮಿಳುನಾಡಿನಲ್ಲಿ ಸಾರ್ವಜನಿಕ ರಜೆ ಘೋಷಿಸಲಾಗಿದೆ
* ಕೇರಳ ಮತ್ತು ತಮಿಳುನಾಡಿನ ಮಧ್ಯೆ ಓಡಾಡಬೇಕಿದ್ದ 6 ವಿಶೇಷ ರೈಲುಗಳ ಸಂಚಾರವನ್ನು ನೈರುತ್ಯ ರೈಲ್ವೆಯ ತಿರುವನಂತಪುರ ವಿಭಾಗವು ರದ್ದುಪಡಿಸಿದೆ
* ತಮಿಳುನಾಡು ಮತ್ತು ಆಂಧ್ರಪ್ರದೇಶದ ಮಧ್ಯೆ ಸಂಚರಿಸಬೇಕಿದ್ದ ಹಲವು ರೈಲುಗಳ ಸಂಚಾರ ರದ್ದು ಮಾಡಲಾಗಿದೆ

*

ತಮಿಳುನಾಡು ಮತ್ತು ಪುದುಚೇರಿ ಮುಖ್ಯಮಂತ್ರಿಗಳ ಜತೆ ಈಗಾಗಲೇ ಮಾತನಾಡಿದ್ದೇನೆ. ಚಂಡಮಾರುತವನ್ನು ಎದುರಿಸಲು ಕೇಂದ್ರದಿಂದ ಅಗತ್ಯ ನೆರವು ನೀಡಲಾಗುತ್ತದೆ.
-ನರೇಂದ್ರ ಮೋದಿ, ಪ್ರಧಾನಿ

*

ಚಂಡಮಾರುತದಿಂದ ಉಂಟಾಗಲಿರುವ ತುರ್ತುಸ್ಥಿತಿಯನ್ನು ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಸರ್ಕಾರದ ಎಲ್ಲಾ ಸಂಸ್ಥೆಗಳೂ ಸನ್ನದ್ಧವಾಗಿವೆ.
-ವಿ.ನಾರಾಯಣ ಸ್ವಾಮಿ, ಪುದುಚೇರಿ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.