ADVERTISEMENT

ನವದೆಹಲಿ | ದರ್ಗಾದ ಗೋಡೆ ಕುಸಿತ: ಐವರ ಸಾವು

ಹುಮಾಯೂನ್‌ ಸಮಾಧಿ ಬಳಿ ನಿರ್ಮಿಸಿರುವ ಕಟ್ಟಡ; ನಾಲ್ವರಿಗೆ ಗಾಯ

ಪಿಟಿಐ
Published 15 ಆಗಸ್ಟ್ 2025, 15:40 IST
Last Updated 15 ಆಗಸ್ಟ್ 2025, 15:40 IST
   

ನವದೆಹಲಿ: ಇಲ್ಲಿನ ನಿಜಾಮುದ್ದೀನ್‌ ಪ್ರದೇಶದ ಹುಮಾಯೂನ್‌ ಸಮಾಧಿ ಬಳಿ ಇರುವ ದರ್ಗಾದ ಗೋಡೆ ಶುಕ್ರವಾರ ಕುಸಿದು ಐವರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ.

ಮಧ್ಯಾಹ್ನ 3.55ರ ಸುಮಾರಿಗೆ ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಒಟ್ಟು ಒಂಬತ್ತು ಮಂದಿ ಗಾಯಗೊಂಡಿದ್ದು, ಎಐಐಎಂಎಸ್‌ ಟ್ರಾಮಾ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಈ ಪೈಕಿ ಒಬ್ಬರನ್ನು ಎಲ್‌ಎನ್‌ಜೆಪಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಟ್ರಾಮಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಐವರು ಅಸುನೀಗಿದ್ದಾರೆ’ ಎಂದು ಜಂಟಿ ಪೊಲೀಸ್‌ ಕಮಿಷನರ್‌ ಸಂಜಯ್‌ ಕುಮಾರ್‌ ಜೈನ್‌ ತಿಳಿಸಿದ್ದಾರೆ.

‘ಶುಕ್ರವಾರದ ಪ್ರಾರ್ಥನೆಗಾಗಿ ದರ್ಗಾಕ್ಕೆ ಜನ ಭೇಟಿ ನೀಡಿದ್ದರು. ಮಳೆ ಬೀಳುತ್ತಿದ್ದರಿಂದ ಕೊಠಡಿಯ ಒಳಗೆ ಕೂತಿದ್ದಾಗ ಈ ಅವಘಡ ಸಂಭವಿಸಿದೆ’ ಎಂದು ಹೇಳಿದ್ದಾರೆ.

ADVERTISEMENT

ಸ್ಥಳಕ್ಕೆ ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್‌, ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಿಬ್ಬಂದಿ ಹಾಗೂ ದೆಹಲಿ ಪೊಲೀಸರು ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಅವಶೇಷಗಳಡಿ ಸಿಲುಕಿದ್ದ 10ರಿಂದ 12 ಮಂದಿಯನ್ನು ರಕ್ಷಿಸಲಾಗಿದೆ.

ಈಗ ಕುಸಿದಿರುವ ಗೋಡೆಯು 16ನೇ ಶತಮಾನದಲ್ಲಿ ನಿರ್ಮಾಣಗೊಂಡ ಸ್ಮಾರಕದ ಮುಖ್ಯ ಗೊಮ್ಮಟಕ್ಕೆ ಸಂಬಂಧಿಸಿದ್ದಲ್ಲ. ಈ ಸ್ಮಾರಕದ ಆವರಣದಲ್ಲಿರುವ ಇಂತಹದ್ದೇ ರಚನೆಯ ಗೋಡೆಯಾಗಿದೆ. ಇದರ ಕುಸಿತಕ್ಕೆ ನಿಖರ ಕಾರಣ ಗೊತ್ತಾಗಿಲ್ಲ. ಇತ್ತೀಚೆಗೆ ಬಿದ್ದ ಮಳೆಯಿಂದಾಗಿ ಗೋಡೆಯು ದುರ್ಬಲಗೊಂಡಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಹುಮಾಯೂನ್‌ ಸಮಾಧಿಗೆ ಯಾವುದೇ ಹಾನಿಯಾಗಿಲ್ಲ. ಇದರ ಬಳಿ ಹೊಸದಾಗಿ ನಿರ್ಮಿಸಿದ್ದ ಕಟ್ಟಡದ ಒಂದು ಭಾಗ ಕುಸಿದಿದ್ದು, ಇದರ ಕೆಲ ಅವಶೇಷಗಳು ಸಮಾಧಿಯ ಗೋಡೆಗಳ ಮೇಲೆ ಬಿದ್ದಿವೆ’ ಎಂದು ಹುಮಾಯೂನ್‌ ಸಮಾಧಿಯ ಪುನರುಜ್ಜೀವನದ ಹೊಣೆ ಹೊತ್ತಿರುವ ಆಗಾ ಖಾನ್‌ ಟ್ರಸ್ಟ್‌ ಫಾರ್‌ ಕಲ್ಚರಲ್‌ ಸಂಸ್ಥೆಯ ವಾಸ್ತುಶಿಲ್ಪಿ ರತೀಶ್‌ ನಂದಾ ತಿಳಿಸಿದ್ದಾರೆ.

ಹುಮಾಯೂನ್‌ ಸಮಾಧಿಯು ಯುನೆಸ್ಕೊ ವಿಶ್ವ ಪಾರಂಪರಿಕ ತಾಣ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ರಾಷ್ಟ್ರ ರಾಜಧಾನಿಯ ಪ್ರಮುಖ ಪ್ರವಾಸಿ ತಾಣವಾಗಿದೆ. ಪ್ರತಿದಿನ ದೇಶ ಹಾಗೂ ವಿದೇಶದ ನೂರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.