ADVERTISEMENT

ಚಿರಾಗ್‌ಗೆ ಕಾಡಿದ ಅಪ್ಪನ ಅನುಪಸ್ಥಿ: ಎಲ್‌ಜೆಪಿ ಸುರಂಗದಲ್ಲಿ ಮೂಡದ ಬೆಳಕು

ಒಂದೂ ಸೀಟು ಗೆಲ್ಲದ ಎಲ್‌ಜೆಪಿ

ಅಭಯ್ ಕುಮಾರ್
Published 10 ನವೆಂಬರ್ 2020, 18:23 IST
Last Updated 10 ನವೆಂಬರ್ 2020, 18:23 IST
ಚಿರಾಗ್ ಪಾಸ್ವಾನ್
ಚಿರಾಗ್ ಪಾಸ್ವಾನ್   

ಪಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಪ್ರಚಾರ ಕಣದಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದ ಲೋಕಜನಶಕ್ತಿ ಪಕ್ಷದ (ಎಲ್‌ಜೆಪಿ) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಲೆಕ್ಕಾಚಾರ ತಲೆಕೆಳಗಾಗಿದೆ. ಸ್ಪರ್ಧಿಸಿದ್ದ 137 ಕ್ಷೇತ್ರಗಳಲ್ಲೂ ಅವರ ಪಕ್ಷ ಸೋಲುಂಡಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಹಣಿಯುವ ಉದ್ದೇಶದಿಂದ ಬಹುತೇಕ ಅಭ್ಯರ್ಥಿಗಳನ್ನು ಜೆಡಿಯು ವಿರುದ್ಧವೇ ಕಣಕ್ಕಿಳಿಸಲಾಗಿತ್ತು.

‘ಚುನಾವಣೆಯ ಬಳಿಕ ಬಿಜೆಪಿ ಹಾಗೂ ಎಲ್‌ಜೆಪಿ ಸೇರಿ ಬಿಹಾರದಲ್ಲಿ ಸರ್ಕಾರ ರಚಿಸಲಿವೆ. ನನ್ನ ಒಂದೇ ಒಂದು ಗುರಿ ಎಂದರೆ, ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರನ್ನು ಸೋಲಿಸಿ, ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲಿಗಟ್ಟುವುದು’ ಎಂದು ಚಿರಾಗ್ ತಮ್ಮ ಪ್ರತಿ ರ್‍ಯಾಲಿಯಲ್ಲಿಯೂ ಪುನರುಚ್ಚರಿಸಿದ್ದರು. ‘ನಾನು ಮೋದಿ ಅವರ ಬಂಟ ಹನುಮ’ ಎಂದು ಹೇಳಿದ್ದೂ ಫಲ ನೀಡಲಿಲ್ಲ.

ಆದರೆ ಚಿರಾಗ್ ಪಾಸ್ವಾನ್ ಅವರಿಂದ ಅಂತರ ಕಾಯ್ದುಕೊಂಡಿದ್ದ ಬಿಜೆಪಿ, ನಿತೀಶ್ ಅವರೇ ಮುಖ್ಯಮಂತ್ರಿ ಅಭ್ಯರ್ಥಿ ಎಂಬ ಮಾತನ್ನು ಪದೇ ಪದೇ ಹೇಳುತ್ತಾ ಬಂದಿತು.

ADVERTISEMENT

ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ಚಿರಾಗ್ ತಮ್ಮ ತಂದೆ ರಾಮ್‌ವಿಲಾಸ್ ಪಾಸ್ವಾನ್ ಅವರನ್ನು ಕಳೆದುಕೊಂಡರು. ಅವರ ಅನುಪಸ್ಥಿತಿಯಲ್ಲಿ ಚುನಾವಣೆ ಎದುರಿಸಿದ ಚಿರಾಗ್, ಬಿಜೆಪಿಯ ಬಂಡಾಯ ಮುಖಂಡರನ್ನು ಜೆಡಿಯು ಅಭ್ಯರ್ಥಿಗಳ ವಿರುದ್ಧ ಕಣಕ್ಕಿಳಿಸುವ ಯತ್ನ ಮಾಡಿದರು.

ಚಿರಾಗ್ ಅವರ ಪಕ್ಷ ಯಾವುದೇ ಸಾಧನೆ ಮಾಡದಿದ್ದರೂ, ನಿತೀಶ್ ಕುಮಾರ್ ಅವರಿಗೆ ದೊಡ್ಡ ಹೊಡೆತ ನೀಡಿದ್ದಂತೂ ಸ್ಪಷ್ಟ. 2005ರಿಂದ ಬಿಹಾರದಲ್ಲಿ ಆಡಳಿತದಲ್ಲಿರುವ ಜೆಡಿಯು, ಈ ಬಾರಿ ಎಲ್‌ಜೆಪಿಯಿಂದಾಗಿ ತೀವ್ರ ಆಘಾತಕ್ಕೆ ಒಳಗಾಗಿದೆ.

ಏನೇ ಪ್ರಯತ್ನ ಮಾಡಿದರೂ, ಎಲ್‌ಜೆಪಿಗೆ ಗೆಲುವು ಸಾಧ್ಯವಾಗಲಿಲ್ಲ. 2000ನೇ ಇಸ್ವಿಯಲ್ಲಿ ಅಸ್ತಿತ್ವಕ್ಕೆ ಬಂದ ಪಕ್ಷ, ಮೊದಲ ಬಾರಿಗೆ ಚುನಾವಣೆಯಲ್ಲಿ ಸೊನ್ನೆ ಸುತ್ತಿದೆ. ರಾಂವಿಲಾಸ್‌ ಪಾಸ್ವಾನ್ ಅವರ ಅನುಪಸ್ಥಿತಿ ಪಕ್ಷಕ್ಕಾದ ದೊಡ್ಡ ನಷ್ಟ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಎಲ್‌ಜೆಪಿ ಹಾದಿ ಮಸುಕಾಗುವ ಲಕ್ಷಣಗಳು ಗೋಚರಿಸುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.