ADVERTISEMENT

ದೆಹಲಿ | ಕೋವಿಡ್‌–19 ಸಮುದಾಯದಲ್ಲಿ ಪ್ರಸರಣವಾಗುತ್ತಿಲ್ಲ: ಮನೀಶ್‌ ಸಿಸೋಡಿಯಾ

ಪಿಟಿಐ
Published 9 ಜೂನ್ 2020, 18:02 IST
Last Updated 9 ಜೂನ್ 2020, 18:02 IST
ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ನಂತರ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ಅವರು ಮಾಧ್ಯಮದೊಂದಿಗೆ ಮಾತನಾಡಿದರು. ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಇದ್ದರು   – ಪಿಟಿಐ ಚಿತ್ರ
ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ನಂತರ ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ಅವರು ಮಾಧ್ಯಮದೊಂದಿಗೆ ಮಾತನಾಡಿದರು. ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಇದ್ದರು   – ಪಿಟಿಐ ಚಿತ್ರ   

ನವದೆಹಲಿ: ದೆಹಲಿಗೆ ಸಂಬಂಧಿಸಿದಂತೆ ಸಮುದಾಯದಲ್ಲಿ ಕೋವಿಡ್‌–19 ಪ್ರಸರಣ ಆಗುತ್ತಿದೆ ಎಂದು ಘೋಷಿಸುವ ವಿಷಯವಾಗಿ ಕೇಂದ್ರ ಸರ್ಕಾರ ಮತ್ತು ಎಎಪಿ ಆಡಳಿತದ ದೆಹಲಿ ಸರ್ಕಾರದ ನಡುವೆ ಮಂಗಳವಾರ ಜಟಾಪಟಿ ನಡೆಯಿತು.

ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಲ್‌ ಅಧ್ಯಕ್ಷತೆಯಲ್ಲಿ ನಡೆದ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಡಿಡಿಎಂಎ) ಸಭೆ ಈ ಜಟಾಪಟಿಗೆ ಸಾಕ್ಷಿಯಾಯಿತು.

‘ತಾಂತ್ರಿಕ ಕಾರಣಗಳ ದೃಷ್ಟಿಯಿಂದ ನೋಡಿದಾಗ ದೆಹಲಿಯಲ್ಲಿ ಕೋವಿಡ್‌–19 ಪ್ರಸರಣ ಮೂರನೇ ಹಂತ ತಲುಪಿದೆ, ಅಂದರೆ ಸಮುದಾಯದಲ್ಲಿ ಹಬ್ಬುತ್ತಿದೆ ಎಂದು ಹೇಳಲು ಆಗದು’ ಎಂದು ಕೇಂದ್ರ ಸರ್ಕಾರದ ಅಧಿಕಾರಿಗಳು ಸಭೆಗೆ ತಿಳಿಸಿದರು.

ADVERTISEMENT

ಇದಕ್ಕೆ ಆಕ್ಷೇಪಿಸಿದ ರಾಜ್ಯ ಸರ್ಕಾರದ ಅಧಿಕಾರಿಗಳು, ‘ಸೋಂಕಿನ ಪ್ರಕರಣಗಳು ಹೆಚ್ಚುತ್ತಲೇ ಇವೆ. ಈ ಸಂದರ್ಭದಲ್ಲಿ ತಾಂತ್ರಿಕ ಕಾರಣಗಳನ್ನು ನೀಡುವುದರಲ್ಲಿ ಅರ್ಥ ಇಲ್ಲ’ ಎಂದು ವಾದಿಸಿದರು.

‘ಸಮುದಾಯದಲ್ಲಿ ಕೊರೊನಾ ಸೋಂಕು ಹರಡುತ್ತಿದೆ ಎಂದು ಘೋಷಿಸುವ ಅಧಿಕಾರ ಕೇಂದ್ರಕ್ಕೆ ಮಾತ್ರ ಇದೆ. ಶೇ 50ರಷ್ಟು ಪ್ರಕರಣಗಳಲ್ಲಿ ಸೋಂಕಿನ ಮೂಲ ಪತ್ತೆ ಹಚ್ಚುವುದು ಆರೋಗ್ಯ ಇಲಾಖೆ ಸಿಬ್ಬಂದಿಗೆ ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿತಾಂತ್ರಿಕ ಕಾರಣಗಳಲ್ಲಿ ಮುಳುಗುವುದರಲ್ಲಿ ಅರ್ಥ ಇಲ್ಲ’ ಎಂದು ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ಸಭೆಯ ನಂತರ ಸುದ್ದಿಗಾರರಿಗೆ ತಿಳಿಸಿದರು.

ಸಮುದಾಯದಲ್ಲಿ ಪ್ರಸರಣ ಇಲ್ಲ– ಸಿಸೋಡಿಯಾ: ‘ಮಹಾಮಾರಿ ಕೋವಿಡ್‌–19ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸಮುದಾಯದಲ್ಲಿ ಪ್ರಸರಣವಾಗುತ್ತಿಲ್ಲ’ ಎಂದು ಹೇಳಿರುವ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ, ‘ಕೇಂದ್ರ ಸರ್ಕಾರದ ಅಧಿಕಾರಿಗಳು ಸಹ ಇದೇ ಮಾತನ್ನು ಹೇಳಿದ್ದಾರೆ’ ಎಂದು ತಿಳಿಸಿದರು.

ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಡಿಡಿಎಂಎ) ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,‘ಜುಲೈ ಅಂತ್ಯದ ವೇಳೆಗೆ ದೆಹಲಿಯಲ್ಲಿ 5.5 ಲಕ್ಷದಷ್ಟು ಕೋವಿಡ್‌–19 ಪ್ರಕರಣಗಳು ವರದಿಯಾಗಬಹುದು ಎಂದು ಅಂದಾಜಿಸಲಾಗಿದೆ’ ಎಂದರು.

‘ಜೂನ್‌ 15ರ ವೇಳೆಗೆ ಕೋವಿಡ್‌–19 ಪ್ರಕರಣಗಳ ಸಂಖ್ಯೆ 44 ಸಾವಿರ ದಾಟಲಿದ್ದು, ಆಸ್ಪತ್ರೆಯಲ್ಲಿ 6,600 ಹಾಸಿಗೆಗಳು ಇರಬೇಕಾಗುತ್ತದೆ. ಇನ್ನು, ಜುಲೈ ಅಂತ್ಯದ ವೇಳೆ 80 ಸಾವಿರ ಹಾಸಿಗೆಗಳು ಬೇಕಾಗುತ್ತವೆ ಎಂದು ಅಂದಾಜಿಸಲಾಗಿದೆ’ಎಂದರು.

‘ರಾಜ್ಯ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆಗಳನ್ನು ದೆಹಲಿಗರಿಗೆ ಮಾತ್ರ ಮೀಸಲು ಮಾಡಿ ಹೊರಡಿಸಿದ್ದ ಆದೇಶವನ್ನು ರದ್ದು ಮಾಡಿದ್ದ ತಮ್ಮ ನಿರ್ಧಾರವನ್ನು ಮರುಪರಿಶೀಲಿಸಲು ಲೆಫ್ಟಿನೆಂಟ್‌ ಗವರ್ನರ್‌ ನಿರಾಕರಿಸಿದರು. ಹೀಗಾಗಿ ಎಲ್ಲರಿಗೂ ವೈದ್ಯಕೀಯ ಸೇವೆಯನ್ನು ಮುಂದುವರಿಸಲು ಪ್ರಯತ್ನಿಸಲಾಗುವುದು’ ಎಂದು ಸಿಸೋಡಿಯಾ ಹೇಳಿದರು.

‘ದೆಹಲಿಯಲ್ಲಿ ಹೊಸದಾಗಿ ವರದಿಯಾಗುತ್ತಿರುವ ಕೋವಿಡ್‌–19 ಪ್ರಕರಣಗಳ ಪೈಕಿ ಅರ್ಧದಷ್ಟು ಪ್ರಕರಣ ಸೋಂಕಿನ ಮೂಲಕವೇ ಗೊತ್ತಾ ಗುತ್ತಿಲ್ಲ’ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ ಹೇಳಿದರು.

ಕೇಜ್ರಿವಾಲ್‌ಗೆ ಕೋವಿಡ್–19 ಇಲ್ಲ
ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮಂಗಳವಾರ ಕೋವಿಡ್–19 ಪರೀಕ್ಷೆಗೆ ಒಳಪಟ್ಟಿದ್ದು, ಅವರಿಗೆ ಸೋಂಕು ಇಲ್ಲ ಎನ್ನುವುದು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇಜ್ರಿವಾಲ್ ಅವರಿಗೆ ಭಾನುವಾರ ಮಧ್ಯಾಹ್ನ ಸ್ವಲ್ಪ ಜ್ವರ ಹಾಗೂ ಗಂಟಲು ಕೆರೆತ ಶುರುವಾಗಿತ್ತು. ಹೀಗಾಗಿ ಅವರು ಐಸೊಲೇಷನ್‌ನಲ್ಲಿ ಇದ್ದರು. ಕೇಜ್ರಿವಾಲ್ ಅವರಿಗೆ ಮಧುಮೇಹ ಇದೆ. ಭಾನುವಾರ ಸಂಪುಟ ಸಭೆ ನಡೆಸಿದ ಬಳಿಕ ತಮ್ಮ ಎಲ್ಲ ಪೂರ್ವ ನಿಗದಿತ ಕಾರ್ಯಕ್ರಮಗಳನ್ನು ಅವರು ರದ್ದುಗೊಳಿಸಿ ಪ್ರತ್ಯೇಕವಾಗಿ ಇದ್ದಾರೆ.ಕಳೆದ ಎರಡು ತಿಂಗಳಿನಿಂದ ಅವರು ಬಹುತೇಕ ಸಭೆಗಳನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆಸುತ್ತಿದ್ದಾರೆ.

ತಾತ್ಕಾಲಿಕ ಚಿಕಿತ್ಸಾ ಕೇಂದ್ರ
ಜುಲೈ ಅಂತ್ಯಕ್ಕೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್‌–19 ಪ್ರಕರಣಗಳು 5.5 ಲಕ್ಷ ಗಡಿ ದಾಟುವ ಮುನ್ಸೂಚನೆ ಇರುವ ಕಾರಣದಿಂದಾಗಿ ಇಲ್ಲಿನ ಹಲವು ಒಳಾಂಗಣ ಕ್ರೀಡಾಂಗಣಗಳನ್ನು ತಾತ್ಕಾಲಿಕ ಚಿಕಿತ್ಸಾ ಕೇಂದ್ರಗಳನ್ನಾಗಿ ಬಳಸಿಕೊಳ್ಳಬಹುದು ಎಂದು ದೆಹಲಿ ಸರ್ಕಾರದ ತಂಡವೊಂದು ಸಲಹೆ ನೀಡಿದೆ.

ಪ್ರಗತಿ ಮೈದಾನ್‌, ಇಂದಿರಾ ಗಾಂಧಿ ಒಳಾಂಗಣ ಕ್ರೀಡಾಂಗಣ, ಜೆಎಲ್‌ಎಲ್‌ ಕ್ರೀಡಾಂಗಣ, ತ್ಯಾಗರಾಜ್‌ ಒಳಾಂಗಣ ಕ್ರೀಡಾಂಗಣ, ಧ್ಯಾನ್‌ಚಂದ್‌ ರಾಷ್ಟ್ರೀಯ ಕ್ರೀಡಾಂಗಣ ಸೇರಿದಂತೆ ಕೆಲವು ಕ್ರೀಡಾಂಗಣಗಳನ್ನು ಚಿಕಿತ್ಸಾ ಕೇಂದ್ರಗಳಾಗಿ ಬಳಸಿಕೊಳ್ಳಬಹುದು ಎಂದುಲೆಫ್ಟಿನೆಂಟ್‌ ಗವರ್ನರ್‌ ಅನಿಲ್‌ ಬೈಜಲ್‌ ಅವರು ರಚಿಸಿರುವ ತಂಡ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.