ADVERTISEMENT

ಆಮ್ಲಜನಕ ಕೊರತೆಯಿಂದ ಒಬ್ಬರೂ ಮೃತಪಟ್ಟಿಲ್ಲ –ಉತ್ತರ ಪ್ರದೇಶ ಸರ್ಕಾರ

ಪಿಟಿಐ
Published 16 ಡಿಸೆಂಬರ್ 2021, 11:46 IST
Last Updated 16 ಡಿಸೆಂಬರ್ 2021, 11:46 IST
   

ಲಖನೌ (ಪಿಟಿಐ): ಕೋವಿಡ್ ಎರಡನೇ ಅಲೆಯಲ್ಲಿ ರಾಜ್ಯದಲ್ಲಿ ಆಮ್ಲಜನಕ ಕೊರತೆಯಿಂದ ಒಬ್ಬರೂ ಮೃತಪಟ್ಟಿಲ್ಲ ಎಂದು ಉತ್ತರ ಪ್ರದೇಶ ಸರ್ಕಾರ ಪ್ರತಿಪಾದಿಸಿದೆ. ಆದರೆ, ವಿರೋಧ ಪಕ್ಷಗಳು ಈ ಹೇಳಿಕೆಯನ್ನು ಅಲ್ಲಗಳೆದಿವೆ.

ಕೋವಿಡ್‌ ಸೋಂಕಿನಿಂದ ರಾಜ್ಯದಲ್ಲಿ 22,915 ಜನರು ಮೃತಪಟ್ಟಿದ್ದರು. ಅವರಿಗೆ ನೀಡಿದ ಮರಣ ಪ್ರಮಾಣಪತ್ರ
ದಲ್ಲಿ ‘ಆಮ್ಲಜನಕ ಕೊರತೆಯಿಂದ ಸಾವು ಸಂಭವಿಸಿದೆ’ ಎಂಬ ಉಲ್ಲೇಖವಿಲ್ಲ ಎಂದು ಸರ್ಕಾರ ಹೇಳಿದೆ.

ವಿಧಾನಪರಿಷತ್ತಿನಲ್ಲಿ ಗುರುವಾರ ಕಾಂಗ್ರೆಸ್‌ ಸದಸ್ಯ ದೀಪಕ್‌ ಸಿಂಗ್ ಅವರ ಪ್ರಶ್ನೆಗೆ ಉತ್ತರಿಸಿದ ಆರೋಗ್ಯ ಸಚಿವ ಜೈಪ್ರತಾಪ್‌ ಸಿಂಗ್ ಅವರು ಈ ಮಾಹಿತಿಯನ್ನು ನೀಡಿದರು.

ADVERTISEMENT

ಈ ಬಗ್ಗೆ ಗಮಸೆಳೆದ ದೀಪಕ್ ಸಿಂಗ್‌, ‘ಆಮ್ಲಜನಕ ಕೊರತೆಯಿಂದ ಸಾವು ಸಂಭವಿಸಿದೆ ಎಂದು ಸಚಿವರು ಪತ್ರ ಬರೆದಿದ್ದರು. ಅನೇಕ ಸಂಸದರೂ ಇಂತಹುದೇ ದೂರು ನೀಡಿದ್ದರು. ಆಮ್ಲಜನಕವಿಲ್ಲದೇ ಸಾವು ಸಂಭವಿಸಿದ್ದ ಅನೇಕ ಘಟನೆಗಳು ನಡೆದವು. ಇಂಥ ಪ್ರಕರಣಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದೆಯೇ? ಆಮ್ಲಜನಕವಿಲ್ಲದೇ ಸತ್ತವರ ಶವಗಳು ಗಂಗಾನದಿಯಲ್ಲಿ ತೇಲಿದ್ದನ್ನು ರಾಜ್ಯ ಸರ್ಕಾರ ಗಮನಿಸಲಿಲ್ಲವೇ’ ಎಂದು ಪ್ರಶ್ನಿಸಿದರು.

ಆಸ್ಪತ್ರೆಗೆ ಸೇರಿದ್ದವರು ಮೃತಪಟ್ಟಾಗ ವೈದ್ಯರು ಪ್ರಮಾಣಪತ್ರ ನೀಡುತ್ತಾರೆ. 22,915 ಸಾವುಗಳಿಗೆ ಸಂಬಂಧಿಸಿ ನೀಡಿರುವ ಯಾವುದೇ ಪ್ರಮಾಣ‍ಪತ್ರದಲ್ಲಿ ಆಮ್ಲಜನಕ ಕೊರತೆಯ ಉಲ್ಲೇಖವಿಲ್ಲ ಎಂದು ಸಚಿವರು ಹೇಳಿದರು.

ಸಚಿವರ ಉತ್ತರಕ್ಕೆ ಆಕ್ಷೇಪಿಸಿದ ಸಮಾಜವಾದಿ ಪಕ್ಷದ ಉದಯ್‌ವೀರ್ ಸಿಂಗ್, ‘ಸರ್ಕಾರ ಪ್ರಮಾಣಪತ್ರದಲ್ಲಿ ಬರೆಯದೇ ಇದ್ದ ಮಾತ್ರಕ್ಕೆ ಸತ್ಯ ಬದಲಾಗುವುದಿಲ್ಲ’ ಎಂದು ಹೇಳಿದರು. ದೀಪಕ್ ಸಿಂಗ್ ಅವರು, ‘ಹಾಗಾದರೆ ಆಮ್ಲಜನಕದ ಕೊರತೆ ಇದೆ ಎಂದು ಸಚಿವರು ಬರೆದಿದ್ದ ಪತ್ರಗಳೂ ಸುಳ್ಳೇ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.