ಸುಪ್ರೀಂ ಕೋರ್ಟ್
ನವದೆಹಲಿ: ‘ಆಪರೇಷನ್ ಸಿಂಧೂರ’ ಕುರಿತು ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪ ಎದುರಿಸುತ್ತಿರುವ ಅಶೋಕ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಅಲಿ ಖಾನ್ ಮಹಮೂದಾಬಾದ್ ಅವರ ಮಧ್ಯಂತರ ಜಾಮೀನನ್ನು ವಿಸ್ತರಿಸಿ ಸುಪ್ರೀಂ ಕೋರ್ಟ್ ಬುಧವಾರ ಆದೇಶಿಸಿದೆ.
ಈ ಕುರಿತು ಆದೇಶ ಹೊರಡಿಸಿದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಹಾಗೂ ದೀಪಾಂಕರ ದತ್ತಾ ಅವರು ಇದ್ದ ನ್ಯಾಯಪೀಠ, ಮುಂದಿನ ವಿಚಾರಣೆ ವೇಳೆಗೆ ಪ್ರೊ. ಅಲಿ ಖಾನ್ ವಿರುದ್ಧದ ತನಿಖೆಗೆ ಸಂಬಂಧಿಸಿದ ವರದಿ ಸಲ್ಲಿಸುವಂತೆ ಎಸ್‌ಐಟಿಗೆ ನಿರ್ದೇಶನ ನೀಡಿತು.
ವಿಚಾರಣೆ ವೇಳೆ, ‘ಪ್ರೊ.ಅಲಿ ಖಾನ್ ಅವರ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಯಾವುದೇ ಅಡಚಣೆ ಇಲ್ಲ. ಆದರೆ, ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿ ಅವರು ಆನ್‌ಲೈನ್‌ಲಲ್ಲಿ ಯಾವುದೇ ಪೋಸ್ಟ್ ಹಾಕುವಂತಿಲ್ಲ’ ಎಂದು ನ್ಯಾಯಪೀಠ ಹೇಳಿತು.
‘ದೇಶದಲ್ಲಿ ನಡೆಯುವ ಭಯೋತ್ಪಾದಕ ದಾಳಿ ಅಥವಾ ಉಗ್ರರ ದಾಳಿಗೆ ಪ್ರತ್ಯುತ್ತರವಾಗಿ ಭಾರತೀಯ ಪಡೆಗಳು ನಡೆಸುವ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಕೂಡ ಪ್ರೊ.ಅಲಿ ಖಾನ್ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಬಾರದು’ ಎಂದೂ ನ್ಯಾಯಪೀಠ ನಿರ್ಬಂಧ ಹೇರಿದೆ.
‘ತನಿಖೆಯನ್ನು ದೀರ್ಘಕಾಲದವರೆಗೆ ನಡೆಸದೇ, ತ್ವರಿತವಾಗಿ ಪೂರ್ಣಗೊಳಿಸಬೇಕು’ ಎಂದು ಹರಿಯಾಣ ಪೊಲೀಸರಿಗೆ ಪೀಠವು ನಿರ್ದೇಶನ ನೀಡಿತು.
‘ಆಪರೇಷನ್ ಸಿಂಧೂರ’ ಕುರಿತ ಅವಹೇಳನಕಾರಿ ಪೋಸ್ಟ್ ಮಾಡಿದ ಅರೋಪದಡಿ ಪ್ರೊ.ಅಲಿ ಖಾನ್ ಅವರನ್ನು ಮೇ 18ರಂದು ಬಂಧಿಸಿದ್ದ ಹರಿಯಾಣ ಪೊಲೀಸರು, ಅವರ ವಿರುದ್ಧ ಎರಡು ಎಫ್‌ಐಆರ್ ದಾಖಲಿಸಿದ್ದರು.
ಪ್ರೊ.ಅಲಿ ಖಾನ್ ಅವರಿಗೆ ಸುಪ್ರೀಂ ಕೋರ್ಟ್, ಮೇ 21ರಂದು ಮಧ್ಯಂತರ ಜಾಮೀನು ನೀಡಿತ್ತು. ಅಲ್ಲದೆ, ಅವರ ವಿರುದ್ಧದ ಎಫ್‌ಐಆರ್‌ಗಳ ಕುರಿತು ಪರಿಶೀಲನೆಗೆ ಮೂವರು ಸದಸ್ಯರ ಎಸ್‌ಐಟಿ ರಚಿಸಬೇಕು ಎಂದೂ ನಿರ್ದೇಶನ ನೀಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.