ADVERTISEMENT

ಹಕ್ಕಿಜ್ವರದ ಆತಂಕ ಬೇಡ: ಪೀಪಲ್ಸ್‌ ಹೆಲ್ತ್‌ ಆರ್ಗನೈಸೇಷನ್‌ ಇಂಡಿಯಾ ಭರವಸೆ

ಮುಂಬೈ ಮೂಲದ ಪೀಪಲ್ಸ್‌ ಹೆಲ್ತ್‌ ಆರ್ಗನೈಸೇಷನ್‌– ಇಂಡಿಯಾ ಸಂಸ್ಥೆಯ ಭರವಸೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2024, 15:48 IST
Last Updated 7 ಏಪ್ರಿಲ್ 2024, 15:48 IST
....
....   

ಮುಂಬೈ: ಹಲವೆಡೆ ಹಕ್ಕಿಜ್ವರ(ಎಚ್‌5ಎನ್‌1) ಹರಡುತ್ತಿದೆ. ಇದು ಕೋವಿಡ್‌– 19 ಸಾಂಕ್ರಾಮಿಕಕ್ಕಿಂತ ಗಂಭೀರ ಆರೋಗ್ಯ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ಹೇಳಲಾಗಿದೆ. ಈ ನಡುವೆಯೇ, ಮುಂಬೈ ಮೂಲದ ಪೀಪಲ್ಸ್‌ ಹೆಲ್ತ್‌ ಆರ್ಗನೈಸೇಷನ್‌– ಇಂಡಿಯಾ (ಪಿಎಚ್‌ಒ) ಸಂಸ್ಥೆಯು ಹಕ್ಕಿಜ್ವರದ ಬಗ್ಗೆ  ಆತಂಕಕ್ಕೀಡಾಗುವ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದೆ. 

ಇದೇವೇಳೆ, ಜಾಗತಿಕ, ರಾಷ್ಟ್ರ, ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ಈ ಸಾಂಕ್ರಾಮಿಕವನ್ನು ಎದುರಿಸಲು ತಯಾರಿ ಮಾಡಿಕೊಳ್ಳುವ ಅಗತ್ಯವನ್ನೂ ಸಂಸ್ಥೆಯು ಒತ್ತಿಹೇಳಿದೆ. ‘ಹಕ್ಕಿ ಜ್ವರದ ಕುರಿತು ಹರಿಬಿಡಲಾಗುತ್ತಿರುವ ಮಾಹಿತಿಗಳ ಸತ್ಯಾಸತ್ಯತೆ ಕುರಿತು ಸರ್ಕಾರ ಮತ್ತು ವೈದ್ಯಕೀಯ ಸಂಸ್ಥೆಗಳು ಕೂಡಲೇ ಪ್ರಕಟಣೆ ಹೊರಡಿಸಬೇಕು’  ಎಂದು ಪಿಎಚ್‌ಒ ಪ್ರಧಾನ ಕಾರ್ಯದರ್ಶಿ ಡಾ. ಈಶ್ವರ ಗಿಲಾಡ ಅವರು ಹೇಳಿದ್ದಾರೆ.

ಇನ್‌ಫ್ಲುಯೆನ್ಜಾ ಎ, ಹಕ್ಕಿಜ್ವರ ಮತ್ತು ಎಚ್‌5ಎನ್‌1 ವೈರಾಣು ಕುರಿತು ಉತ್ತಮ ತಿಳಿವಳಿಕೆ ನೀಡುವ ಅಗತ್ಯವಿದೆ. ಕಾಲಕಾಲಕ್ಕೆ ಜನರಿಗೆ ಫ್ಲು (ಜ್ವರ, ನೆಗಡಿ) ಬರುತ್ತದೆ. ಅದಕ್ಕೆ ಕಾರಣ ಇನ್‌ಫ್ಲುಯೆನ್ಜಾ ಎ ಮತ್ತು ಇನ್‌ಫ್ಲುಯೆನ್ಜಾ ಬಿ ವೈರಾಣುಗಳಾಗಿರುತ್ತವೆ. ಇನ್‌ಫ್ಲುಯೆನ್ಜಾ ಬಿ ಸೋಂಕು ತೀವ್ರಸ್ವರೂಪದ್ದಲ್ಲ. ಆದರೆ, ಇನ್‌ಫ್ಲುಯೆನ್ಜಾ ‘ಎ’ಯು ಎಚ್‌1ಎನ್‌1 ಮತ್ತು ಎಚ್‌3ಎನ್‌2 ಉಪಮಾದರಿಗಳನ್ನು ಒಳಗೊಂಡಿರುತ್ತದೆ. ಇದು ಹೆಚ್ಚು ರೋಗಕಾರಕವಾಗಿರುತ್ತದೆ. ಹಕ್ಕಿಜ್ವರ, ಹಂದಿ ಜ್ವರ, ಕುದುರೆ, ಶ್ವಾನ, ಬಾವುಲಿ ಜ್ವರಗಳೂ ‘ಎ’ ಮಾದರಿಯ ಉಪಮಾದರಿಗಳಾಗಿವೆ ಎಂದು ಈಶ್ವರ ಅವರು ಹೇಳಿದ್ದಾರೆ.

ADVERTISEMENT

ಹಕ್ಕಿಜ್ವರ ಎಂದರೇನು?: ಎಚ್‌5ಎನ್‌1 ವೈರಾಣು ‘ಎ’ ಮಾದರಿಯ ಉಪಮಾದರಿಯಾಗಿದ್ದು, ಅದು ಹಕ್ಕಿಗಳನ್ನು ಬಾಧಿಸುತ್ತದೆ ಮತ್ತು ಏವಿಯನ್‌ ಇನ್‌ಫ್ಲುಯೆನ್ಜಾಕ್ಕೆ (ಹಕ್ಕಿಜ್ವರ) ಕಾರಣವಾಗುತ್ತದೆ. ಇನ್‌ಫ್ಲುಯೆನ್ಜಾ ವೈರಾಣುಗಳ ವಂಶವಾಹಿ ಸಂರಚನೆಯು ವಿವಿಧ ಬಗೆಯ ಹೆಮಗ್ಲುಟಿನಿನ್‌ (ಎಚ್‌) ಮತ್ತು ನ್ಯೂರಾಮಿನೈಡೇಸ್‌ ಎಂಬ ಪ್ರೋಟಿನ್‌ಗಳಿಂದ ಆಗಿರುತ್ತದೆ. ಎಚ್‌5ಎನ್‌1 ವೈರಾಣುವು ಎಚ್ ಪ್ರೊಟೀನ್‌ನ 5ನೇ ಮಾದರಿ ಮತ್ತು ಎನ್‌ ಪ್ರೊಟೀನ್‌ನ 1ನೇ ಮಾದರಿಯಿಂದ ಆಗಿರುತ್ತದೆ ಎಂದು ಅವರು ಹೇಳಿದ್ದಾರೆ. 

ಈ ಸೋಂಕು ಮಾನವರಿಗೂ ತಗುಲುತ್ತಾದರೂ, ಮಾನವರಿಂದ ಮಾನವರಿಗೆ ಹರಡಿರುವುದಕ್ಕೆ ಆಧಾರವಿಲ್ಲ. ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಕಾರ 2003ರಿಂದ 2024ರ ವರೆಗೆ 888 ಹಕ್ಕಿಜ್ವರದ ಪ್ರಕರಣಗಳು ವರದಿಯಾಗಿವೆ. 463 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ವೈರಾಣು ಮತ್ತು ಇತರ ಸೂಕ್ಷ್ಮಾಣು ಜೀವಿಗಳಿಂದ ಹರಡುವ ಸೋಂಕಿನ ಜಾಡುಪತ್ತೆ, ವೈರಾಣು ಸಂರಚನೆ ವಿಶ್ಲೇಷಣೆ, ಮಾಹಿತಿ ವಿನಿಮಯ, ಲಸಿಕೆ ಅಭಿವೃದ್ಧಿ, ಚಿಕಿತ್ಸೆ ಮತ್ತು ಸೋಂಕು ತಡೆಗಟ್ಟುವಿಕೆ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸುವುದು ಈ ರೀತಿಯ ಸೋಂಕುಗಳು ಹರಡಿದಾಗ ಮಾಡಬೇಕಿರುವ ಕೆಲಸ. ಇದನ್ನು ವಿಜ್ಞಾನಿಗಳು ಮತ್ತು ಸರ್ಕಾರಗಳು ಮಾಡಬೇಕಿದೆ ಎಂದೂ ಅವರು ಹೇಳಿದ್ದಾರೆ.

‘ಜನ ಸಾಮಾನ್ಯರು ಮಾಡಬಹುದಾದ ಕೆಲಸ ಎಂದರೆ, ಪರಿಸರ, ಪರಿಸರ ವ್ಯವಸ್ಥೆ, ಪ್ರಾಣಿಗಳು ಮತ್ತು ಅಪರೂಪದ ಸಸ್ಯ ತಳಿಗಳ ಆವಸ್ಥಾನದ ಮೇಲೆ ಅತಿಕ್ರಮಣ ಮಾಡದಿರುವುದು. ಮನುಷ್ಯರಿಗೆ ಬದುಕುವ ಹಕ್ಕು ಇರುವಂತೆ ಪರಿಸರದಲ್ಲಿ ಪ್ರಾಣಿ ಪಕ್ಷಿಗಳಿಗೂ ಬದುಕುವ ಹಕ್ಕಿದೆ ಎಂಬುದನ್ನು ನಾವು ಅರಿತುಕೊಳ್ಳಬೇಕು. ಇಲ್ಲದಿದ್ದರೆ ಪ್ರಾಣಿ, ಪಕ್ಷಿಗಳಿಗೆ ತಗಲುವ ಸೋಂಕುಗಳು ನಮಗೂ ತಗುಲಬಹುದು. ವಿಷಪೂರಿತ ಮರಗಿಡಗಳಿಂದ ನಮ್ಮ ಆರೋಗ್ಯಕ್ಕೆ ಹಾನಿಯಾಗಬದುದು ಮತ್ತು ಜಾಗತಿಕ ತಾಪಮಾನದ ತಂದೊಡ್ಡುವ ವಿಪತ್ತುಗಳನ್ನು ಎದುರಿಸಬೇಕಾಗುತ್ತದೆ’ ಎಂದು ಈಶ್ವರ ಎಚ್ಚರಿಸಿದ್ದಾರೆ.

‘ಕೋವಿಡ್‌ ಸಾಂಕ್ರಾಮಿಕದ ಬಳಿಕ ಕೆಲ ವಿಜ್ಞಾನಿಗಳಿಗೆ ಮುಂದೆ ಬರಲಿರುವ ಸಾಂಕ್ರಾಮಿಕದ ಕುರಿತು ಚರ್ಚಿಸುವುದು ಮತ್ತು ಅದರ ಪರಿಣಾಮವು ಕೋವಿಡ್‌ಗಿಂತ ಹಲವು ಪಟ್ಟು ಹೆಚ್ಚು ಇರಲಿದೆ ಎಂದು ಹೇಳುವುದು ಖಯಾಲಿಯಾಗಿದೆ. ಡಬ್ಲ್ಯುಎಚ್‌ಒ ಕೂಡಾ ಇದಕ್ಕೆ ಧ್ವನಿಗೂಡಿಸುತ್ತಿರುವುದು ಖೇದಕರ ಸಂಗತಿ’ ಎಂದು ಆಕ್ಷೇಪಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.