ADVERTISEMENT

ಬಾಲಾಕೋಟ್ ದಾಳಿಯಲ್ಲಿ ಪಾಕ್‌ ಯೋಧರಾಗಿ,ಪ್ರಜೆಯಾಗಲಿ ಮೃತಪಟ್ಟಿಲ್ಲ:ಸುಷ್ಮಾ ಸ್ವರಾಜ್

ಏಜೆನ್ಸೀಸ್
Published 7 ಆಗಸ್ಟ್ 2019, 4:49 IST
Last Updated 7 ಆಗಸ್ಟ್ 2019, 4:49 IST
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್   

ಅಹಮದಾಬಾದ್:‘ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಬಾಲಾಕೋಟ್‌ವಾಯುದಾಳಿಯಲ್ಲಿ ಪಾಕಿಸ್ತಾನದ ಯಾವುದೇ ಯೋಧರಾಗಲಿ ಅಥವಾ ಪ್ರಜೆಗಳಾಗಲಿ ಮೃತಪಟ್ಟಿಲ್ಲ’ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಗುರುವಾರ ತಿಳಿಸಿದರು.

ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರು ಇದೇ ಮೊದಲ ಬಾರಿ ಭಾರತ ನಡೆಸಿದ ಬಾಲಾಕೋಟ್‌ ದಾಳಿಯ ಕುರಿತು ಮಾತನಾಡಿದ್ದಾರೆ.

ಪಕ್ಷದ ಮಹಿಳಾ ಕಾರ್ಯಕರ್ತರನ್ನು ಉದ್ದೇಶಿಸಿ ಗುರುವಾರ ಮಾತನಾಡಿದ ಅವರು, ‘ಫೆಬ್ರುವರಿ 14ರಂದು 40 ಸಿಆರ್‌ಪಿಎಫ್‌ ಯೋಧರನ್ನು ಗುರಿಯಾಗಿಸಿಕೊಂಡು ಪುಲ್ವಾಮಾದಲ್ಲಿನಡೆಸಿದ ಆತ್ಮಾಹುತಿ ದಾಳಿಗೆ ಪ್ರತಿಯಾಗಿ ವಾಯುಸೇನೆ ನಡೆಸಿದ ದಾಳಿ ಕೇವಲ, ಜೈಷ್‌–ಎ–ಮೊಹಮ್ಮದ್‌ ಉಗ್ರರ ನೆಲೆಯನ್ನೇ ಗುರಿಯಾಗಿಸಿಕೊಂಡೇ ಮಾಡಲಾಗಿದೆ’ ಎಂದು ವಿವರಿಸಿದರು.

ADVERTISEMENT

‘ದೇಶದ ರಕ್ಷಣೆಗಾಗಿಯೇ ಈ ವಾಯು ದಾಳಿಯನ್ನು ನಡೆಸಲಾಗಿದೆ ಎಂದು ಅಂತರರಾಷ್ಟ್ರೀಯ ಸಮುದಾಯಕ್ಕೆ ತಿಳಿಸಿದ್ದೇವೆ. ಆ ದಾಳಿಯಲ್ಲಿ ಪಾಕಿಸ್ತಾನದ ಪ್ರಜೆಗಳಿಗಾಗಲಿ, ಯೋಧರಿಗಾಗಲಿ ಯಾವುದೇ ಹಾನಿಯಾಗಿಲ್ಲ’ ಎಂದರು.

‘ಜೈಷ್‌–ಎ–ಮೊಹಮ್ಮದ್‌ ಉಗ್ರರ ನೆಲೆಯನ್ನೇ ಗುರಿಯಾಗಿಸಿಕೊಂಡು ದಾಳಿ ಮಾಡುವುದಾಗಿ ಸೇನೆ ತಿಳಿಸಿತ್ತು ಮತ್ತು ಹಾಗೇ ಮಾಡಿದೆ’ ಎಂದು ಹೇಳಿದರು.

‘ಈ ದಾಳಿಯ ನಂತರಅಂತರರಾಷ್ಟ್ರೀಯ ಸಮುದಾಯ ಭಾರತವನ್ನು ಬೆಂಬಲಿಸಿದೆ.ಜಗತ್ತಿಗೆ ಮಾದರಿಯಾಗುವ ಕಾರ್ಯಸೂಚಿಯನ್ನು ನಿರ್ಮಿಸಿಕೊಟ್ಟಿರುವ ನರೇಂದ್ರ ಮೋದಿ ಅವರು ವಿಶ್ವದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದಾರೆ’ ಎಂದು ಶ್ಲಾಘಿಸಿದ್ದಾರೆ.

2008ರಲ್ಲಿ ನಡೆದ ಮುಂಬೈ ದಾಳಿಯ ಬಗ್ಗೆ ಪ್ರಸ್ತಾಪಿಸಿದ ಸುಷ್ಮಾ, ‘ಆ ದಾಳಿಯಲ್ಲಿ 14 ದೇಶಗಳ 40 ವಿದೇಶಿಗರು ಮೃತಪಟ್ಟಿದ್ದರೂ, ಪಾಕಿಸ್ತಾನವನ್ನು ಪ್ರತ್ಯೇಕವಾಗಿಡಲು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರಕ್ಕೆ ಸಾಧ್ಯವಾಗಿರಲಿಲ್ಲ’ ಎಂದು ಟೀಕಿಸಿದರು.

‘ಕಳೆದ ತಿಂಗಳು ಇಸ್ಲಾಮಿಕ್‌ ಸಹಕಾರ ಸಂಘಟನೆ(ಒಐಸಿ) ವಿದೇಶಾಂಗ ಸಚಿವರ ಸಮಿತಿಯ 46ನೇ ಶೃಂಗಸಭೆಗೆ ಗೌರವ ಅತಿಥಿಯಾಗಿ ಭಾಗವಹಿಸಲು ಸುಷ್ಮಾ ಸ್ವರಾಜ್‌ ಅವರನ್ನು ಆಹ್ವಾನಿಸಿತ್ತು. ಇದಕ್ಕೆ ಪಾಕಿಸ್ತಾನ ಆಕ್ಷೇಪ ವ್ಯಕ್ತಪಡಿಸಿತ್ತು. ಆದರೆ, ಆತಿಥ್ಯ ದೇಶವಾದ ಯುಎಇ ಆಕ್ಷೇಪವನ್ನು ನಿರಾಕರಿಸಿತು’ ಎಂದು ಪ್ರಸ್ತಾಪಿಸಿದರು.

‘ಈ ಬಾರಿಯೂ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಬಹುಮತ ದೊರೆಯಬೇಕು. 1998–2004ರಲ್ಲಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಮೈತ್ರಿ ಸರ್ಕಾರ ಇದ್ದಿದ್ದರಿಂದ ಅವರಿಗೆ ಇದ್ದ ಆಲೋಚನೆಗಳನ್ನು ಜಾರಿಗೆ ತರಲು ಸಾಧ್ಯವಾಗಲಿಲ್ಲ. ಆ ಸ್ಥಿತಿ ಬಿಜೆಪಿಗೆ ನೀಡಬೇಡಿ’ ಎಂದು ಕೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.