ADVERTISEMENT

ರೈಲ್ವೆ ಖಾಸಗೀಕರಣವಿಲ್ಲ, ಹೊರಗುತ್ತಿಗೆ ಮಾತ್ರ: ಗೋಯಲ್‌

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2019, 19:46 IST
Last Updated 22 ನವೆಂಬರ್ 2019, 19:46 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ‘ಭಾರತೀಯ ರೈಲ್ವೆಯನ್ನು ಖಾಸಗೀಕರಣ ಮಾಡುತ್ತಿಲ್ಲ. ಬದಲಿಗೆ, ಪ್ರಯಾಣಿಕರಿಗೆ ಉತ್ತಮ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ವಾಣಿಜ್ಯ ಸೇವೆಗಳು ಮತ್ತು ರೈಲುಗಳೊಳಗೆ ನೀಡುವ ಸೌಲಭ್ಯಗಳನ್ನು ಹೊರಗುತ್ತಿಗೆ ನೀಡಲಾಗುತ್ತಿದೆ’ ಎಂದು ರೈಲ್ವೆ ಸಚಿವ ಪೀಯೂಷ್‌ ಗೋಯಲ್‌ ಶುಕ್ರವಾರ ರಾಜ್ಯಸಭೆಗೆ ತಿಳಿಸಿದರು.

‘ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವುದು ಸರ್ಕಾರದ ಉದ್ದೇಶವೇ ವಿನಾ, ರೈಲ್ವೆ ಸೇವೆಯನ್ನು ಖಾಸಗೀಕರಣಗೊಳಿಸುವುದಲ್ಲ. ರೈಲ್ವೆ ಯಾವತ್ತಿಗೂ ಭಾರತದ ಮತ್ತು ಭಾರತೀಯರ ಆಸ್ತಿಯಾಗಿಯೇ ಇರುತ್ತದೆ’ ಎಂದು ಅವರು ಸ್ಪಷ್ಟಪಡಿಸಿದರು.

‘ರೈಲ್ವೆ ಸೇವೆಗಳಿಗಾಗಿ ಹೆಚ್ಚುತ್ತಿರುವ ಬೇಡಿಕೆಯನ್ನು ಈಡೇರಿಸಲು ಮತ್ತು ಗುಣಮಟ್ಟದ ಸೇವೆ ನೀಡಬೇಕಾದರೆ ಇಲಾಖೆಗೆ ಮುಂದಿನ 12 ವರ್ಷಗಳಲ್ಲಿ ₹ 50 ಲಕ್ಷ ಕೋಟಿ ಬೇಕಾಗುತ್ತದೆ. ಇಷ್ಟೊಂದು ಹಣವನ್ನು ಹೊಂದಿಸುವುದು ಕಷ್ಟವಾಗಿರುವುದರಿಂದ ಕೆಲವು ಸೇವೆಗಳನ್ನು ಹೊರಗುತ್ತಿಗೆ ನೀಡಲು ಸರ್ಕಾರ ತೀರ್ಮಾನಿಸಿದೆ’ ಎಂದು ಸಚಿವರು ತಿಳಿಸಿದರು.

ADVERTISEMENT

ಇಲಾಖೆಗೆ ಕಾರ್ಪೊರೇಟ್‌ ಸ್ವರೂಪ ನೀಡುವುದರಿಂದ ಉದ್ಯೋಗಿಗಳಿಗೆ ತೊಂದರೆ ಆಗಲಾರದು. ಖಾಸಗಿ ಸಂಸ್ಥೆಗಳು ಉತ್ತಮ ಸೇವೆ ನೀಡುವ ಮೂಲಕ ಹೆಚ್ಚುವರಿ ಉದ್ಯೋಗಗಳನ್ನು ಸೃಷ್ಟಿಸುತ್ತವೆ ಎಂದು ರೈಲ್ವೆ ಖಾತೆಯ ರಾಜ್ಯ ಸಚಿವಸುರೇಶ್‌ ಅಂಗಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.