ADVERTISEMENT

ಸಂಸತ್‌ ಆವರಣದಲ್ಲಿ ಧರಣಿಗೆ ಅವಕಾಶ ಇಲ್ಲ

​ಪ್ರಜಾವಾಣಿ ವಾರ್ತೆ
Published 15 ಜುಲೈ 2022, 19:35 IST
Last Updated 15 ಜುಲೈ 2022, 19:35 IST
ಸಂಸತ್‌ ಭವನ
ಸಂಸತ್‌ ಭವನ   

ನವದೆಹಲಿ: ಸಂಸತ್‌ ಭವನದ ಆವರಣದಲ್ಲಿ ಪ್ರತಿಭಟನೆ, ಧರಣಿ ನಡೆಸುವಂತಿಲ್ಲ ಎಂದು ರಾಜ್ಯಸಭಾ ಕಾರ್ಯಾಲಯವು ನೀಡಿದ ನಿರ್ದೇಶನಕ್ಕೆ ವಿರೋಧ ಪಕ್ಷಗಳು ಶುಕ್ರವಾರ ಆಕ್ಷೇಪ ವ್ಯಕ್ತ‍ಪಡಿಸಿವೆ. ‘ಸಾಮಾನ್ಯ ಬಳಕೆ’ಯ ಹಲವು ಪದಗಳನ್ನು ‘ಅಸಂಸದೀಯ ಅಭಿವ್ಯಕ್ತಿ’ ಯ ಪಟ್ಟಿಗೆ ಸೇರಿಸಿದ್ದ ಕ್ರಮವನ್ನು ವಿರೋಧ ಪಕ್ಷಗಳು ಗುರುವಾರವಷ್ಟೇ ಟೀಕಿಸಿದ್ದವು.

‘ಸಂಸತ್‌ ಭವನದ ಆವರಣವನ್ನು ಪ್ರತಿಭಟನೆ, ಧರಣಿ, ಮುಷ್ಕರ, ಸತ್ಯಾಗ್ರಹ ಅಥವಾ ಧಾರ್ಮಿಕ ಕಾರ್ಯಕ್ರಮಗ
ಳಿಗೆ ಸಂಸತ್ ಸದಸ್ಯರು ಬಳಸಬಾರದು’ ಎಂದು ರಾಜ್ಯಸಭಾ ಕಾರ್ಯಾಲಯವು ನೀಡಿದ ನಿರ್ದೇಶನದಲ್ಲಿ ಇದೆ.

‘ವಿಶ್ವಗುರು ಅವರ ಇತ್ತೀಚಿನ ಹೊಡೆತ–ಧರಣಿಗೂ ಇಲ್ಲ ಅವಕಾಶ’ ಎಂದು ಸಂಸದ ಜೈರಾಮ್‌ ರಮೇಶ್‌ ಅವರು ಟ್ವೀಟ್‌ ಮಾಡುವುದರೊಂದಿಗೆ ಈ ವಿಚಾರ ಬಹಿರಂಗವಾಯಿತು. ಬಳಿಕ, ವಿರೋಧ ಪಕ್ಷಗಳ ಹಲವು ಮುಖಂಡರು ಈ ಕ್ರಮವನ್ನು ಖಂಡಿಸಿ ಟ್ವೀಟ್‌ ಮಾಡಿದ್ದಾರೆ.

ADVERTISEMENT

‘ಇದೊಂದು ಸಾಮಾನ್ಯ ಕ್ರಮ. ಪ್ರತಿ ಅಧಿವೇಶನಕ್ಕೆ ಮುನ್ನವೂ ಇಂತಹ ಸುತ್ತೋಲೆ ಹೊರಡಿಸಲಾಗುತ್ತದೆ. ಇಂತಹ ರೂಢಿಗತ ವಿಚಾರಗಳನ್ನು ಸುದ್ದಿ ಮಾಡಲು ಸಂಸದರು ಬಳಸಿಕೊಳ್ಳಬಾರದು’ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ. ಇದು ಹೊಸ ನಿರ್ದೇಶನ ಅಲ್ಲ, ಇಂತಹ ನಿರ್ದೇಶನಗಳನ್ನು ಆಗಾಗ ಹೊರಡಿಸಲಾಗುತ್ತದೆ ಎಂದು ಸಂಸತ್ತಿನ ಮೂಲಗಳು ತಿಳಿಸಿವೆ.

ಡಿಜಿಟಲ್‌ ಸುದ್ದಿ ಮಾಧ್ಯಮಕ್ಕೆ ಮೂಗುದಾರ?:

ಡಿಜಿಟಲ್‌ ಸುದ್ದಿ ಮಾಧ್ಯಮವನ್ನು ನಿಯಂತ್ರಿಸುವ ಚಿಂತನೆಯಲ್ಲಿ ಕೇಂದ್ರ ಸರ್ಕಾರ ಇದೆ. ಅದಕ್ಕಾಗಿ ಪತ್ರಿಕೆ ಮತ್ತು ನಿಯತಕಾಲಿಕ ನೋಂದಣಿ ಮಸೂದೆ ಎಂಬ ಹೊಸ ಕಾಯ್ದೆ ತರಲು ಮುಂದಾಗಿದೆ.

ಈಗ, ಪತ್ರಿಕೆ ಮತ್ತು ಪುಸ್ತಕಗಳ ನೋಂದಣಿ ಕಾಯ್ದೆ 1867 ಜಾರಿಯಲ್ಲಿದೆ. ಇದು ಪತ್ರಿಕೆಗಳ ನಿಯಂತ್ರಣಕ್ಕೆ ಬಳಕೆ ಆಗುತ್ತಿದೆ.

‘ಡಿಜಿಟಲ್‌ ಸುದ್ದಿ ಪೋರ್ಟಲ್‌ಗಳನ್ನು ಕೂಡ ಪತ್ರಿಕೆಗಳ ರೀತಿಯಲ್ಲಿಯೇ ನಿಯಂತ್ರಿಸುವುದಕ್ಕಾಗಿ ಹೊಸ ಕಾಯ್ದೆ ತರಲು ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಚಿಂತಿಸುತ್ತಿದೆ. ಈ ಬಗೆಗಿನ ಸಮಾಲೋಚನೆ ಪೂರ್ಣಗೊಂಡಿದೆ. ಕೇಂದ್ರ ಸಚಿವ ಸಂಪುಟದ ಮುಂದೆ ಸದ್ಯವೇ ಮಸೂದೆ ಬರಲಿದೆ’ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಸೂದೆಯು ಕಾಯ್ದೆಯ ರೂಪಕ್ಕೆ ಬಂದರೆ, ಸುದ್ದಿ ಪೋರ್ಟಲ್‌ಗಳು ಕೂಡ ನೋಂದಣಿ ಮಾಡಿಕೊಳ್ಳ
ಬೇಕಾಗುತ್ತವೆ. ಸುದ್ದಿ ಪೋರ್ಟಲ್‌ಗಳು ನಿಯಮಗಳನ್ನು ಉಲ್ಲಂಘಿಸಿದರೆ ಅವುಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವು ರಿಜಿಸ್ಟ್ರಾರ್ ಜನರಲ್‌ ಅವರಿಗೆ ದೊರೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.