ಹೈದರಾಬಾದ್: ‘ನಕ್ಸಲರೊಂದಿಗೆ ಶಾಂತಿ ಮಾತುಕತೆ ಸಾಧ್ಯವೇ ಇಲ್ಲ. ಸಿಪಿಎಂ ಸಂಘಟನೆಯನ್ನು ನಿಷೇಧಿಸಲಾಗಿದೆ. ಆದ್ದರಿಂದ ಈ ಸಂಘಟನೆಯ ಸದಸ್ಯರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಪೊಲೀಸರಲ್ಲಿ ಶರಣಾಗಲೇಬೇಕು’ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಅವರು ಭಾನುವಾರ ಇಲ್ಲಿ ಹೇಳಿದರು.
ಛತ್ತೀಸಗಢ ಮತ್ತು ತೆಲಂಗಾಣ ಗಡಿಯಲ್ಲಿ ನಕ್ಸಲರ ವಿರುದ್ಧ ನಡೆಸಲಾಗುತ್ತಿರುವ ‘ಆಪರೇಷನ್ ಕಗಾರ್’ ಕಾರ್ಯಾಚರಣೆ ಕುರಿತು ಪ್ರತಿಕ್ರಿಯಿಸಿದ್ದ ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಅವರು, ‘ನಕ್ಸಲ್‌ವಾದವನ್ನು ಸಾಮಾಜಿಕ ಆಯಾಮದಿಂದ ನೋಡಬೇಕೇ ಹೊರತು ಕಾನೂನು ಸುವ್ಯವಸ್ಥೆ ಆಯಾಮದಿಂದ ಅಲ್ಲ’ ಎಂದಿದ್ದರು. ಈ ಹೇಳಿಕೆಗೆ ಸಂಜಯ್ ಅವರು ಪ್ರತಿಕ್ರಿಯಿಸಿದ್ದಾರೆ.
‘ಶಸ್ತ್ರಾಸ್ತ್ರ ಇಟ್ಟುಕೊಳ್ಳುವುದನ್ನು ಹೇಗೆ ಸಾಮಾಜಿಕ ಆಯಾಮದಿಂದ ನೋಡುವುದು? ಸಿಪಿಎಂ ಅನ್ನು ನಿಷೇಧಿಸಿದ್ದೇ ಕಾಂಗ್ರೆಸ್. ರೇವಂತ ಅವರಿಗೆ ಧೈರ್ಯವಿದ್ದರೆ, ಈ ಸಂಘಟನೆ ಮೇಲೆ ಹೇರಿರುವ ನಿಷೇಧವನ್ನು ತೆರವು ಮಾಡಲಿ’ ಎಂದು ಸವಾಲು ಹಾಕಿದರು.
ಬಿಆರ್‌ಎಸ್ ಅಧ್ಯಕ್ಷ ಚಂದ್ರಬಾಬು ನಾಯ್ದು ಅವರ ಹೇಳಿಕೆಗೂ ಪ್ರತಿಕ್ರಿಯಿಸಿದ ಸಂಜಯ್, ‘ನಕ್ಸಲರೊಂದಿಗೆ ಶಾಂತಿ ಮಾತುಕತೆ ನಡೆಸಿ ಎನ್ನುವುದಕ್ಕೆ ಕಾಂಗ್ರೆಸ್ ಮತ್ತು ಬಿಆರ್‌ಎಸ್ ಪಕ್ಷಗಳ ಮಧ್ಯೆ ಸ್ಪರ್ಧೆ ಏರ್ಪಟ್ಟಂತಿದೆ. ನಕ್ಸಲರು ಮುಗ್ಧ ಜನರನ್ನು ಹತ್ಯೆ ಮಾಡಿದಾಗ, ಯಾವ ಪಕ್ಷಗಳೂ ಯಾವ ಸಂಘ–ಸಂಸ್ಥೆಗಳೂ ಇಂಥ ಹಿಂಸಾ ಕೃತ್ಯವನ್ನು ಪ್ರಶ್ನಿಸಲಿಲ್ಲ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.