ADVERTISEMENT

ನ್ಯಾಯಾಧೀಶರ ಅನುಮತಿ ಇಲ್ಲದೇ ಬೇರೆ ಸಂಸ್ಥೆಗಳಿಂದ ಮರುತನಿಖೆ ನಡೆಸುವಂತಿಲ್ಲ: ನ್ಯಾಯಾಲಯ

ಪಿಟಿಐ
Published 30 ಏಪ್ರಿಲ್ 2023, 18:58 IST
Last Updated 30 ಏಪ್ರಿಲ್ 2023, 18:58 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್   

ನವದೆಹಲಿ: ಸಂಬಂಧಪಟ್ಟ ನ್ಯಾಯಾಧೀಶರ ಅನುಮತಿ ಅಥವಾ ಅನುಮೋದನೆ ಇಲ್ಲದೇ ಯಾವುದೇ ಅಪರಾಧ ಕುರಿತು ಬೇರೆಬೇರೆ ಸಂಸ್ಥೆಗಳಿಂದ ಮರುತನಿಖೆ ನಡೆಸುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ನ್ಯಾಯಮೂರ್ತಿಗಳಾದ ಎಂ.ಆರ್‌.ಶಾ ಹಾಗೂ ಸಿ.ಟಿ.ರವಿಕುಮಾರ್‌ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.

ಉತ್ತರ ಪ್ರದೇಶದ ಬಡೌತ್‌ನಲ್ಲಿ 2014ರಲ್ಲಿ ಸತ್ಯವೀರ್ ಅಲಿಯಾಸ್ ಕಲ್ಲು ಎಂಬುವವರ ಹತ್ಯೆ ನಡೆದಿತ್ತು. ಹತ್ಯೆ ಕುರಿತು ಮರುತನಿಖೆ ನಡೆಸುವಂತೆ ಕೋರಿ ಪ್ರಕರಣದ ಆರೋಪಿಯೊಬ್ಬರ ತಾಯಿ ಗೃಹ ಇಲಾಖೆಗೆ ಪತ್ತ ಬರೆದಿದ್ದರು. ಈ ಪತ್ರದ ಆಧಾರದಲ್ಲಿ, ಹತ್ಯೆ ಕುರಿತು ಮರುತನಿಖೆ ನಡೆಸುವಂತೆ ಸಿಬಿ–ಸಿಐಡಿಗೆ ನಿರ್ದೇಶಿಸಿ ಇಲಾಖೆಯ ಕಾರ್ಯದರ್ಶಿ 2019ರ ಫೆ.13ರಂದು ಆದೇಶ ಹೊರಡಿಸಿದ್ದರು.

ADVERTISEMENT

ಈ ಪ್ರಕರಣಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಪೀಠ, ಉತ್ತರ ಪ್ರದೇಶ ಗೃಹ ಇಲಾಖೆ ಕಾರ್ಯದರ್ಶಿ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿತು.

‘ಗೃಹ ಇಲಾಖೆ ಕಾರ್ಯದರ್ಶಿ ಆ ಇಲಾಖೆಯ ಮುಖ್ಯಸ್ಥ. ಪ್ರಕರಣ ಕುರಿತು ಬೇರೆ ಸಂಸ್ಥೆಯಿಂದ ತನಿಖೆಗೆ ಆದೇಶಿಸುವ ಅಧಿಕಾರ ಕಾರ್ಯದರ್ಶಿಗೆ ಇದೆ’ ಎಂಬ ಆರೋಪಿಯ ವಾದವನ್ನು ನ್ಯಾಯಪೀಠ ತಳ್ಳಿಹಾಕಿತು.

‘ತನಿಖಾಧಿಕಾರಿಯು ಯಾವುದೇ ಅಪರಾಧ ಕುರಿತು, ಸಿಆರ್‌ಪಿಸಿ ಸೆಕ್ಷನ್ 173 ಸಬ್‌ಸೆಕ್ಷನ್(2) ಅಡಿ ನ್ಯಾಯಾಧೀಶರಿಗೆ ಚಾರ್ಜ್‌ಶೀಟ್‌ ಸಲ್ಲಿಸಿದ್ದರೂ ಪ್ರಕರಣ ಕುರಿತು ತನಿಖೆ ಮುಂದುವರಿಸುವ ಅಧಿಕಾರ ಹೊಂದಿದ್ದಾರೆ. ಇದಕ್ಕೆ ನ್ಯಾಯಾಧೀಶರ ಪೂರ್ವಾನುಮತಿ ಅಗತ್ಯ ಇಲ್ಲ’ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.