ADVERTISEMENT

ಜೆಡಿಯು ಜೊತೆಗೆ ಮುನಿಸಿಲ್ಲ ಎಂದ ಬಿಜೆಪಿ: ಬಿಹಾರದಲ್ಲಿ ಏನಾಗುತ್ತಿದೆ?

ಪಿಟಿಐ
Published 16 ಡಿಸೆಂಬರ್ 2021, 16:16 IST
Last Updated 16 ಡಿಸೆಂಬರ್ 2021, 16:16 IST
ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌
ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌   

ಪಟ್ನಾ: ಮಿತ್ರ ಪಕ್ಷ ಜೆಡಿಯು ಜೊತೆಗಿನ ಭಿನ್ನಾಭಿಪ್ರಾಯದ ಊಹಾಪೋಹಗಳನ್ನು ಬಿಜೆಪಿ ಗುರುವಾರ ತಳ್ಳಿಹಾಕಿದೆ.

ಬಿಹಾರಕ್ಕೆ ವಿಶೇಷ ಸ್ಥಾನಮಾನದ ಅಗತ್ಯವಿಲ್ಲ ಎಂಬ ಬಿಹಾರದ ಉಪ ಮುಖ್ಯಮಂತ್ರಿ, ಬಿಜೆಪಿ ನಾಯಕಿ ರೇಣು ದೇವಿ ಅವರ ಹೇಳಿಕೆಗೆ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಇತ್ತೀಚೆಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ, ಬಿಹಾರದ ಮೈತ್ರಿ ಸರ್ಕಾರದ ಒಳಗೆ ಎಲ್ಲವೂ ಸರಿಯಾಗಿಲ್ಲ ಎಂಬರ್ಥದಲ್ಲಿ ಮಾಧ್ಯಮಗಳಲ್ಲಿ ವರದಿಯಾಗಿತ್ತು.

ವಿಶೇಷ ಸ್ಥಾನಮಾನದ ವಿಚಾರವಾಗಿ ರಾಜ್ಯ ಸರ್ಕಾರವು ನೀತಿ ಆಯೋಗಕ್ಕೆ ವಿವರವಾದ ಟಿಪ್ಪಣಿ ಕಳುಹಿಸಿದ್ದ ಸಂದರ್ಭದಲ್ಲೇ ಉಪ ಮುಖ್ಯಮಂತ್ರಿ ರೇಣು ದೇವಿ ನೀಡಿದ್ದ ಹೇಳಿಕೆಯ ಬಗ್ಗೆ ನಿತೀಶ್‌ ದಿಗ್ಭ್ರಮೆ ವ್ಯಕ್ತಪಡಿಸಿದ್ದರು. ವಿಶೇಷ ಸ್ಥಾನಮಾನದ ಅನುದಾನವು ರಾಜ್ಯದ ಆರ್ಥಿಕ ಬೆಳವಣಿಗೆಯನ್ನು ವೃದ್ಧಿಸುತ್ತದೆ ಎಂಬುದು ನಿತೀಶ್‌ ನಿಲುವಾಗಿತ್ತು.

ADVERTISEMENT

ಇದರ ಜತೆಗೆ, ಹರಿಯಾಣದ ಮನೋಹರ್ ಲಾಲ್ ಖಟ್ಟರ್ ಸರ್ಕಾರದಿಂದ ಪ್ರೇರಣೆ ಪಡೆದು, ರಸ್ತೆಬದಿಯ ನಮಾಜ್ ನಿಷೇಧಿಸಬೇಕೆಂದು ರಾಜ್ಯದ ಬಿಜೆಪಿ ನಾಯಕರು ಪ್ರತಿಪಾದಿಸುತ್ತಿರುವುದರ ಬಗ್ಗೆಯೂ ನಿತೀಶ್‌ ಅಸಮಾಧಾನ ವ್ಯಕ್ತಪಡಿಸಿದ್ದರು.

ನಿತೀಶ್‌ ಕುಮಾರ್‌ ಅವರ ಜೆಡಿಯುಗಿಂತಲೂ ಹೆಚ್ಚಿನ ಶಾಸಕರನ್ನು ಹೊಂದಿರುವುದೇ ಬಿಜೆಪಿಯ ಈ ವರ್ತನೆಗೆ ಕಾರಣ ಎಂಬ ಊಹಾಪೋಹಗಳು ರಾಜ್ಯದಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

ಆದರೆ, ಇದೆಲ್ಲವನ್ನೂ ನಿರಾಕರಿಸಿರುವ ರಾಜ್ಯ ಬಿಜೆಪಿ ವಕ್ತಾರ ನಿಖಿಲ್ ಆನಂದ್, ‘ಬಿಹಾರದಲ್ಲಿ ಎನ್‌ಡಿಎ ಗಟ್ಟಿಯಾಗಿದೆ. ಕೆಲವು ನಾಯಕರು ವ್ಯಕ್ತಪಡಿಸಿದ ವೈಯಕ್ತಿಕ ಅಭಿಪ್ರಾಯಗಳು ಮೈತ್ರಿಯಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಗುವುದಿಲ್ಲ,’ ಎಂದು ಪ್ರತಿಪಾದಿಸಿದ್ದಾರೆ.

ಗಮನಿಸಬೇಕಾದ ವಿಷಯವೆಂದರೆ, ಆನಂದ್ ಅವರು ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ಈ ವಿಭಾಗವು ರಾಜ್ಯದಲ್ಲಿ ಸಂಖ್ಯಾತ್ಮಕವಾಗಿ ಪ್ರಬಲವಾದ ಹಿಂದುಳಿದ ವರ್ಗಗಳನ್ನು ಪಕ್ಷದ ಪರವಾಗಿ ಸೆಳೆಯುವ ಪ್ರಯತ್ನ ನಡೆಸುತ್ತಿದೆ.

ನಿತೀಶ್‌ ಮತ್ತು ಆರ್‌ಜೆಡಿಯ ಲಾಲು ಪ್ರಸಾದ್ ಬಿಹಾರದ ಪ್ರಬಲ ಒಬಿಸಿ ನಾಯಕರು.

2015 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ನಿತೀಶ್‌ ಮತ್ತು ಲಾಲು ಇಬ್ಬರೂ ಕೈಜೋಡಿಸಿದ್ದರು. ನರೇಂದ್ರ ಮೋದಿ ಅವರು ಪ್ರಯೋಗಿಸಿದ್ದ ‘ಅತಿ ಪಿಚ್ಡಾ’ ( ಅತ್ಯಂತ ಹಿಂದುಳಿದ ವರ್ಗ) ವಿಷಯವನ್ನು ಮೆಟ್ಟಿ ನಿಂತು ಬಿಜೆಪಿಯನ್ನು ಚುನಾವಣೆಯಲ್ಲಿ ಮಣಿಸುವಲ್ಲಿ ನಿತೀಶ್‌–ಲಾಲು ಜೋಡಿ ಯಶಸ್ವಿಯಾಗಿತ್ತು.

ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿ(ಯು) ಕಡಿಮೆ ಸ್ಥಾನ ಗಳಿಸಿದ್ದರೂ, ಬಿಜೆಪಿಯು ನಿತೀಶ್‌ ಅವರೇ ಮುಖ್ಯಮಂತ್ರಿಯಾಗಿರಲು ಒಪ್ಪಿತ್ತು. ಬಿಹಾರದಲ್ಲಿ ಒಬಿಸಿ ಸಮುದಾಯವನ್ನು ಸೆಳೆಯುವಲ್ಲಿ ಬಿಜೆಪಿಗೆ ಆಗುತ್ತಿರುವ ಹಿನ್ನಡೆಯನ್ನು ತಪ್ಪಿಸುವ ಉದ್ದೇಶದಿಂದ ನಿತೀಶ್‌ ಅವರನ್ನು ಸಿಎಂ ಮಾಡಲಾಯಿತು ಎಂದು ಬಿಜೆಪಿ ಮೂಲಗಳು ಒಪ್ಪಿಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.