ADVERTISEMENT

ಪ್ರತಿಕ್ರಿಯೆ ಸೋರಿಕೆಗೆ ‘ಸುಪ್ರೀಂ’ ಕೆಂಗಣ್ಣು

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2018, 20:15 IST
Last Updated 20 ನವೆಂಬರ್ 2018, 20:15 IST
   

ನವದೆಹಲಿ: ಕೇಂದ್ರ ಜಾಗೃತ ಆಯೋಗ (ಸಿವಿಸಿ) ನಡೆಸಿದ ತನಿಖಾ ವರದಿಗೆ ಸಿಬಿಐ ನಿರ್ದೇಶಕ ಅಲೋಕ್‌ ವರ್ಮಾ ಅವರು ನೀಡಿದ ಪ್ರತಿಕ್ರಿಯೆಯು ಮಾಧ್ಯಮಗಳಲ್ಲಿ ಪ್ರಕಟವಾಗಿರುವುದು ಸುಪ್ರೀಂ ಕೋರ್ಟ್‌ ಕೆಂಗಣ್ಣಿಗೆ ತುತ್ತಾಗಿದೆ. ಹಾಗಾಗಿ, ಕಡ್ಡಾಯ ರಜೆ ಮೇಲೆ ಕಳುಹಿಸಿದ್ದನ್ನು ಪ್ರಶ್ನಿಸಿ ಅಲೋಕ್‌ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಮಂಗಳವಾರವೇ ನಡೆಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿತು.

ಅಲೋಕ್‌ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಿ ಅದರ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಸಿವಿಸಿಗೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು. ಸಿವಿಸಿ ವರದಿಯು ಅಲೋಕ್‌ ಅವರನ್ನು ದೋಷಮುಕ್ತಗೊಳಿಸಿಲ್ಲ. ಆದ್ದರಿಂದ ಈ ವರದಿಗೆ ಪ್ರತಿಕ್ರಿಯೆಯನ್ನು ಮುಚ್ಚಿದ ಲಕೋಟೆಯಲ್ಲಿಯೇ ಸಲ್ಲಿಸಬೇಕು ಎಂದು ಕೋರ್ಟ್‌ ಸೂಚಿಸಿತ್ತು.

ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠವು ವಿಚಾರಣೆ ಆರಂಭಿಸುತ್ತಿದ್ದಂತೆಯೇ ಮಾಧ್ಯಮದಲ್ಲಿ ಸುದ್ದಿ ಪ್ರಕಟವಾದ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಅಲೋಕ್‌ ಪರ ಹಿರಿಯ ವಕೀಲ ಎಫ್‌.ಎಸ್‌. ನಾರಿಮನ್‌ ಅವರಿಗೆ ಹೇಳಿತು.

ADVERTISEMENT

‘ವಕೀಲ ಸಮುದಾಯದ ಅತ್ಯಂತ ಗೌರವಾನ್ವಿತ ಸದಸ್ಯರಾದ ನಿಮ್ಮ ಪ್ರತಿಕ್ರಿಯೆ ನಮಗೆ ಬೇಕು. ಈ ಬಗ್ಗೆ ನಾವು ಏನು ಮಾಡಬೇಕು. ಇದಕ್ಕೆ ನೀವು ಪ್ರತಿಕ್ರಿಯೆ ನೀಡಲೇಬೇಕು’ ಎಂದು ಎರಡು ಹಾಳೆಗಳನ್ನು ಪೀಠವು ನಾರಿಮನ್‌ ಅವರಿಗೆ ನೀಡಿತು.

ಮಾಧ್ಯಮದಲ್ಲಿ ಸುದ್ದಿ ಪ್ರಕಟವಾಗಿರುವುದು ತಮಗೂ ಆಘಾತ ತಂದಿದೆ. ಮಾಧ್ಯಮವು ಸ್ವತಂತ್ರವಾಗಿರಬೇಕು ಎಂಬುದು ಸರಿ, ಅದರ ಜತೆಗೆ ಜವಾಬ್ದಾರಿಯುತವಾಗಿಯೂ ಇರಬೇಕು ಎಂದು ನಾರಿಮನ್‌ ಹೇಳಿದರು. ಸುದ್ದಿಯನ್ನು ಬರೆದವರು ಮತ್ತು ಪ್ರಕಟಿಸಿದವರನ್ನು ನ್ಯಾಯಾಲಯಕ್ಕೆ ಕರೆಸಬೇಕು ಎಂದು ಅವರು ಕೋರಿದರು.

‘ಯಾರೊಬ್ಬರೂ ಇಂದೇ (ಮಂಗಳವಾರ) ವಿಚಾರಣೆಗೆ ಅರ್ಹರಲ್ಲ ಎಂದು ಅನಿಸುತ್ತದೆ. ವಿಚಾರಣೆಯನ್ನು ಇದೇ 29ಕ್ಕೆ ಮುಂದೂಡಲಾಗಿದೆ. ಅದಕ್ಕೆ ಕಾರಣವನ್ನು ದಾಖಲಿಸುವ ಅಗತ್ಯವೂ ಇಲ್ಲ’ ಎಂದು ಪೀಠ ಆಕ್ರೋಶದಿಂದಲೇ ಹೇಳಿತು.

ತನಿಖೆ ಸಂದರ್ಭದಲ್ಲಿ ಅಲೋಕ್‌ ಅವರು ಸಿವಿಸಿಗೆ ನೀಡಿದ‍ಪ್ರತಿಕ್ರಿಯೆಯನ್ನು ಆಧರಿಸಿ ಮಾಧ್ಯಮದಲ್ಲಿ ವರದಿ ಪ್ರಕಟವಾಗಿದೆ. ಅದು ಅಲೋಕ್‌ ಅವರು ಸುಪ್ರೀಂ ಕೋರ್ಟ್‌ಗೆ ಮುಚ್ಚಿದ ಲಕೋಟೆಯಲ್ಲಿ ನೀಡಿದ ಪ್ರತಿಕ್ರಿಯೆಯನ್ನು ಆಧರಿಸಿದ ವರದಿಅಲ್ಲ ಎಂದು ನಾರಿಮನ್‌ ವಿವರಿಸಿದರು.

ವರ್ಮಾ ಅವರು ಸೋಮವಾರ ಸುಪ್ರೀಂ ಕೋರ್ಟ್‌ಗೆ ಪ್ರತಿಕ್ರಿಯೆ ಸಲ್ಲಿಸಿದ್ದರು.

ಅಲೋಕ್‌ ವಕೀಲರ ಭಿನ್ನಮತ

ಅಲೋಕ್‌ ಅವರ ವಕೀಲರ ನಡುವೆ ಸಮನ್ವಯ ಇಲ್ಲ ಎಂಬುದು ಸುಪ್ರೀಂ ಕೋರ್ಟ್‌ನಲ್ಲಿಯೇ ಬಹಿರಂಗವಾಯಿತು.

ಪ್ರತಿಕ್ರಿಯೆ ಸಲ್ಲಿಸಲು ಹೆಚ್ಚು ಸಮಯ ಬೇಕು ಎಂದು ಅಲೋಕ್‌ ಪರ ವಕೀಲರಲ್ಲಿ ಒಬ್ಬರಾದ ಗೋಪಾಲ್‌ ಶಂಕರನಾರಾಯಣನ್‌ ಅವರು ಸೋಮವಾರ ಕೋರಿದ್ದನ್ನು ಪೀಠ ಪ್ರಸ್ತಾಪಿಸಿತು.

‘ಇದು ಸಂಪೂರ್ಣ ಅನಧಿಕೃತ. ಹೆಚ್ಚು ಸಮಯ ಕೋರುವಂತೆ ಗೋಪಾಲ್‌ ಅವರಿಗೆ ಯಾರೂ ಸೂಚಿಸಿಲ್ಲ. ನಾನು ಮತ್ತು ನನ್ನ ಸಹೋದ್ಯೋಗಿ ಸುಭಾಷ್‌ ಶರ್ಮಾ ಅವರು ರಾತ್ರಿಯಿಡೀ ಕುಳಿತು ಪ್ರತಿಕ್ರಿಯೆ ಸಿದ್ಧಪಡಿಸಿದ್ದೆವು. ಅವರು ಹೆಚ್ಚು ಸಮಯ ಕೋರಿದ್ದರು ಎಂಬ ವಿಚಾರ ಪತ್ರಿಕೆಗಳಲ್ಲಿ ನೋಡಿದ ಮೇಲೆಯೇ ತಿಳಿಯಿತು’ ಎಂದು ನಾರಿಮನ್‌ ಹೇಳಿದರು.

ಅಲೋಕ್‌ ಅವರ ಸೂಚನೆಯಂತೆಯೇ ಹೆಚ್ಚು ಸಮಯ ಕೋರಲಾಗಿತ್ತು ಎಂದು ಗೋಪಾಲ್‌ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಲಂಚದ ಆರೋಪದ ವರದಿಗೂ ಅತೃಪ್ತಿ

ಸಿಬಿಐ ಡಿಐಜಿ ಮನೀಶ್‌ ಕುಮಾರ್‌ ಸಿನ್ಹಾ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿ ಮಾಧ್ಯಮಗಳಲ್ಲಿ ಪ್ರಕಟವಾಗಿರುವುದರ ಬಗ್ಗೆ ಪೀಠ ಅತೃಪ್ತಿ ವ್ಯಕ್ತಪಡಿಸಿದೆ. ಕೇಂದ್ರ ಸಚಿವರು ಸೇರಿ ಹಲವು ಮಂದಿಯ ವಿರುದ್ಧ ಈ ಅರ್ಜಿಯಲ್ಲಿ ಆರೋಪ ಮಾಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

‘ಇಲ್ಲೊಬ್ಬರು ದೂರುದಾರರು ನಮ್ಮ ಮುಂದೆ ದೂರು ದಾಖಲಿಸಿದ್ದಾರೆ. ಬಳಿಕ ಅದನ್ನು ಊರಿಡೀ ಹಂಚಿಕೊಂಡು ತಿರುಗಿದ್ದಾರೆ’ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.

*ಈ ಸಂಸ್ಥೆಯ ಗೌರವ ರಕ್ಷಿಸಬೇಕು ಎಂದು ಪ್ರಯತ್ನಿ ಸುತ್ತಿದ್ದೇವೆ. ಈ ಜನರಿಗೆ ಅದರಲ್ಲಿ ಆಸಕ್ತಿ ಇಲ್ಲ. ಅವರು ಎಲ್ಲವನ್ನೂ ಹೇಳಿಕೊಂಡು ತಿರುಗುತ್ತಿದ್ದಾರೆ.

- ರಂಜನ್‌ ಗೊಗೊಯಿ, ಮುಖ್ಯ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.