
ತಿರುವನಂತಪುರ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಕೇರಳದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಾರ್ವೆಯ ಪ್ರವಾಸಿ ಜಾನ್ನೆ ಮೆಟ್ಟಿ ಜೋಹಾನ್ಸನ್ ಅವರಿಗೆ ಭಾರತ ಬಿಟ್ಟು ತೆರಳುವಂತೆ ಸೂಚಿಸಲಾಗಿದೆ ಎಂದು ಕೊಚ್ಚಿಯ ವಿದೇಶಾಂಗ ಪ್ರಾದೇಶಿಕ ನೋಂದಣಿ ಕಚೇರಿಯ (ಎಫ್‌ಆರ್‌ಆರ್‌ಒ) ಅಧಿಕಾರಿಗಳು ತಿಳಿಸಿದ್ದಾರೆ.
ಜಾನ್ನೆ ವೀಸಾ ಷರತ್ತುಗಳನ್ನು ಉಲ್ಲಂಘಿಸಿರುವುದರಿಂದ ತಕ್ಷಣವೇ ದೇಶ ತೊರೆಯುವಂತೆ ಕೇಳಿಕೊಳ್ಳಲಾಗಿದೆ ಎಂದು ಎಫ್‌ಆರ್‌ಆರ್‌ಒ ಕಚೇರಿಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.
71 ವರ್ಷದ ಜಾನ್ನೆ ಮೆಟ್ಟಿ ಜೋಹಾನ್ಸನ್ ಸ್ವೀಡನ್ ನಿವಾಸಿಯಾಗಿದ್ದು, ಕೆಲ ವಾರಗಳ ಹಿಂದೆ ಭಾರತಕ್ಕೆ ಭೇಟಿ ನೀಡಿದ್ದರು. ಕಳೆದ ವಾರ ಕೊಚ್ಚಿ ತಲುಪಿದ್ದ ಜಾನ್ನೆ ಡಿ. 23ರಂದು ವಿವಿಧ ಸಾಮಾಜಿಕ–ಸಾಂಸ್ಕೃತಿಕ ಸಂಘಟನೆಗಳು ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಭಾರತದಲ್ಲಿನ ಉದ್ವಿಗ್ನತೆ ಮತ್ತು ಸಿಎಎ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಜಾನ್ನೆ, ಪ್ರತಿಭಟನೆಯ ಚಿತ್ರಗಳು ಮತ್ತು ಅಭಿಪ್ರಾಯವನ್ನು ಪೋಸ್ಟ್ ಮಾಡಿದ್ದರು.
ಎಫ್‌ಆರ್‌ಆರ್‌ಒ ಅಧಿಕಾರಿಗಳು ಗುರುವಾರ ಜಾನ್ನೆಯನ್ನು ತಮ್ಮ ಕಚೇರಿಗೆ ಕರೆಸಿಕೊಂಡು, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಗ್ಗೆ ಪ್ರಶ್ನಿಸಿದ್ದರು. ‘ಕೇವಲ ಕುತೂಹಲದ ಕಾರಣಕ್ಕಾಗಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾಗಿ ಹಾಗೂ ಇದಕ್ಕಾಗಿ ಸ್ಥಳೀಯ ಪೊಲೀಸರಿಂದ ಮೌಖಿಕ ಅನುಮತಿಯನ್ನು ಪಡೆದಿದ್ದೆ’ ಎಂದು ಜಾನ್ನೆ ವಿವರಿಸಿದ್ದಾರೆ. ಆದರೆ, ಈ ಬಗ್ಗೆ ಅಧಿಕಾರಿಗಳು ಗಣನೆಗೆ ತೆಗೆದುಕೊಂಡಿಲ್ಲ ಎನ್ನಲಾಗಿದೆ.
‘ನಾರ್ವೆಗೆ ತೆರಳಲು ವಿಮಾನ ಪ್ರಯಾಣದ ಟಿಕೆಟ್ ತೋರಿಸದೇ ಭಾರತ ಬಿಟ್ಟು ತೆರಳುವಂತಿಲ್ಲ ಎಂದು ವಲಸೆ ಅಧಿಕಾರಿಗಳು ನಿರ್ದೇಶನ ನೀಡಿದ್ದಾರೆ. ನಾನೀಗ ವಿಮಾನ ನಿಲ್ದಾಣದ ದಾರಿಯಲ್ಲಿದ್ದು, ಸ್ನೇಹಿತನೊಬ್ಬ ದುಬೈಗೆ ವಿಮಾನದ ಟಿಕೆಟ್ ತೆಗೆಸಿದ್ದು, ಅಲ್ಲಿಂದ ನಾನು ಸ್ವೀಡನ್‌ಗೆ ತೆರಳಲಿದ್ದೇನೆ’ಎಂದು ಜಾನ್ನೆ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಶುಕ್ರವಾರ ಬೆಳಿಗ್ಗೆ ಬರೆದುಕೊಂಡಿದ್ದಾರೆ.
ಇತ್ತೀಚೆಗಷ್ಟೇ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮದ್ರಾಸ್ ಐಐಟಿಯ ಜರ್ಮನ್ ವಿದ್ಯಾರ್ಥಿಯನ್ನು ದೇಶ ಬಿಟ್ಟು ತೆರಳುವಂತೆ ಸೂಚಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.