ADVERTISEMENT

ಅಜ್ಜ, ಅಜ್ಜಿ ಭೇಟಿಗೆ ಅಡ್ಡಿ ಸಲ್ಲದು: ತೀರ್ಪು ಎತ್ತಿ ಹಿಡಿದ ಹೈಕೋರ್ಟ್‌

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2020, 19:30 IST
Last Updated 19 ಫೆಬ್ರುವರಿ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮುಂಬೈ: ಅಜ್ಜ, ಅಜ್ಜಿಯಂದಿರುತಮ್ಮ ಮೊಮ್ಮಕ್ಕಳನ್ನು ಭೇಟಿ ಮಾಡದಂತೆ ತಡೆಯುವುದು ಸಲ್ಲದು ಎಂದು ಬಾಂಬೆ ಹೈಕೋರ್ಟ್ ಬುಧವಾರ ಅಭಿಪ್ರಾಯಪಟ್ಟಿದೆ. ಮುಂಬೈನ ಮಹಿಳೆಯೊಬ್ಬರಿಗೆ ಈ ಸಂಬಂಧ ಕೋರ್ಟ್ ನಿರ್ದೇಶನ ನೀಡಿದೆ. ಮಹಿಳೆಯ10 ವರ್ಷದ ಮಗ ತನ್ನ ಅಜ್ಜಿ, ಅಜ್ಜಿಯರನ್ನು ವಾರಕ್ಕೊಮ್ಮೆ ಭೇಟಿಯಾಗಬಹುದು ಎಂದು ಕೋರ್ಟ್ ನಿರ್ದೇಶನ ನೀಡಿದೆ.

ಮೊಮ್ಮಕಳು ಅಜ್ಜ, ಅಜ್ಜಿಯನ್ನು ಭೇಟಿ ಮಾಡಲು ಅವಕಾಶ ನೀಡಿ ಕೌಟುಂಬಿಕ ನ್ಯಾಯಾಲಯ ನೀಡಿದ್ದ ತೀರ್ಪು ಪ್ರಶ್ನಿಸಿ ಮಹಿಳೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯನ್ನು ವಜಾ ಮಾಡಿರುವ ಹೈಕೋರ್ಟ್, ಭೇಟಿಗೆ ಅವಕಾಶ ನೀಡುವಂತೆ ಸೂಚಿಸಿದೆ.

ಪ್ರಕರಣ ಏನು?:ಮಹಿಳೆಯ ಪತಿ ತೀರಿಕೊಂಡಿದ್ದು, ಅವರು ಎರಡನೇ ಮದುವೆಯಾಗಿದ್ದಾರೆ.ಮೊದಲನೆಯ ದಾಂಪತ್ಯದಲ್ಲಿ ಅತ್ತೆ–ಮಾವ ತಮ್ಮನ್ನು ಸರಿಯಾಗಿ ನಡೆಸಿಕೊಂಡಿರಲಿಲ್ಲ ಎಂಬುದು ಮಹಿಳೆಯ ಆರೋಪ. ಮಗ ಹುಟ್ಟಿದ ಬಳಿಕ ಅವನು ಈವರೆಗೆ ಅಜ್ಜ, ಅಜ್ಜಿಯನ್ನು ಭೇಟಿಯಾಗಿಲ್ಲ ಎಂದು ಆ ಮಹಿಳೆ ಹೇಳಿದ್ದಾರೆ. ಅತ್ತೆ–ಮಾವ ಸೊಸೆಯನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂಬ ಕಾರಣಕ್ಕೆ ಭೇಟಿ ನಿರಾಕರಣೆ ವಾದವನ್ನು ಒಪ್ಪಲಾಗದು ಎಂದು ಕೋರ್ಟ್ ಹೇಳಿದೆ.

ADVERTISEMENT

2009ರಲ್ಲಿ ಮಗ ಹುಟ್ಟಿದ ಮರುವರ್ಷ ಗಂಡ ತೀರಿಕೊಂಡರು. ಮಹಿಳೆ ತಮ್ಮ ಹೆತ್ತವರ ಜೊತೆ ವಾಸಿಸಲು ಶುರು ಮಾಡಿದರು. ಬಳಿಕ ಮರುಮದುವೆಯಾದರು. ಮೊಮ್ಮಗು ಭೇಟಿಗೆ ಅವಕಾಶ ನೀಡುವಂತೆ ಕೋರಿಅಜ್ಜ, ಅಜ್ಜಿ ಕೋರ್ಟ್ ಮೆಟ್ಟಿಲೇರಿದ್ದರು. ಮುಂಬೈಗೆ ಭೇಟಿ ನೀಡಿದಾಗ ಮೊಮ್ಮಗುವನ್ನು ಭೇಟಿಯಾಗಬಹುದು ಎಂದು 2014ರಲ್ಲಿ ಕೌಟುಂಬಿಕ ನ್ಯಾಯಾಲಯ ತೀರ್ಪು ನೀಡಿತ್ತು.

ಸೊಸೆ ಇದಕ್ಕೆ ಅವಕಾಶ ಮಾಡಿಕೊಡದ ಕಾರಣ, ಅಜ್ಜ–ಅಜ್ಜಿ ಮತ್ತೆ ಕೋರ್ಟ್‌ ಮೊರೆ ಹೋಗಿದ್ದರು. ಕಳೆದ ತಿಂಗಳು ತೀರ್ಪು ನೀಡಿದ್ದ ಕೋರ್ಟ್, ಭೇಟಿಗೆ ಅವಕಾಶ ನಿರಾಕರಿಸಿದರೆ ₹5,000 ದಂಡ ಹಾಕುವುದಾಗಿ ತಿಳಿಸಿತ್ತು. ಇದನ್ನು ಪ್ರಶ್ನಿಸಿ ಮಹಿಳೆಯು ಹೈಕೋರ್ಟ್ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.