ADVERTISEMENT

ಪಕ್ಷದ ಬಗ್ಗೆ ಅಸಮಾಧಾನ ಇಲ್ಲ: ಅಜಿತ್‌ ಪವಾರ್‌

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2022, 13:44 IST
Last Updated 12 ಸೆಪ್ಟೆಂಬರ್ 2022, 13:44 IST
ಅಜಿತ್‌ ಪವಾರ್‌
ಅಜಿತ್‌ ಪವಾರ್‌   

ಮುಂಬೈ: ‘ಪಕ್ಷದ ಕುರಿತು ನಾನು ಅಸಮಾಧಾನ ಹೊಂದಿಲ್ಲ ಮತ್ತು ಪಕ್ಷವು ನನ್ನನ್ನು ಕಡೆಗಣಿಸಿಲ್ಲ’ ಎಂದು ನ್ಯಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷದ (ಎನ್‌ಸಿಪಿ) ನಾಯಕ ಅಜಿತ್‌ ಪವಾರ್‌ ಅವರು ಸೋಮವಾರ ಸ್ಪಷ್ಟಪಡಿಸಿದರು.

ದೆಹಲಿಯಲ್ಲಿ ಭಾನುವಾರ ಆಯೋಜಿಸಿದ್ದ ಎನ್‌ಸಿಪಿಯ 8ನೇ ರಾಷ್ಟ್ರೀಯ ಸಮಾವೇಶದ ಅಂತ್ಯದ ವೇಳೆ ಅವರು ವೇದಿಕೆಯಲ್ಲಿ ಹಾಜರಿರಲಿಲ್ಲ.ಅವರು ಹೊರನಡೆದು ಹೋಗುತ್ತಿರುವ ದೃಶ್ಯವನ್ನು ಮಾಧ್ಯಮಗಳು ತೋರಿಸಿದ್ದವು. ಅಜಿತ್‌ ಪವಾರ್‌ ಹಾಗೂ ಎನ್‌ಸಿಪಿ ಮಹಾರಾಷ್ಟ್ರ ಘಟಕದ ಮುಖ್ಯಸ್ಥ ಜಯಂತ್‌ ಪಾಟೀಲ್‌ ಅವರ ಮಧ್ಯೆ ಶೀತಲ ಸಮರ ನಡೆಯುತ್ತಿದೆ ಎಂಬ ಊಹಾಪೋಹಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಇದಕ್ಕೆ ಮಹತ್ವ ನೀಡಲಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿದ ಅವರು, ‘ಅದು ಕೇವಲ ಶೌಚಾಲಯದ ವಿರಾಮವಾಗಿತ್ತು.ನಾನು ಬೆಳಿಗ್ಗೆಯಿಂದ ವೇದಿಕೆ ಮೇಲೆ ಕುಳಿತಿದ್ದೆ. ಶೌಚಾಲಯಕ್ಕೆ ಹೋಗಬೇಕು ಅನಿಸುವುದು ಸಾಮಾನ್ಯ ವಿಷಯ. ಆದರೆ ಮಾಧ್ಯಮಗಳು ಇದನ್ನೇ ದೊಡ್ಡ ವಿಷಯವನ್ನಾಗಿಸಿವೆ. ಪಕ್ಷ ನನ್ನನ್ನು ಯಾವತ್ತೂ ಕಡೆಗಣಿಸಿಲ್ಲ. ಪಕ್ಷದ ನಾಯಕತ್ವದ ಜೊತೆ ನನಗೆ ಅಸಮಾಧಾನವೂ ಇಲ್ಲ. ಪಕ್ಷ ನನಗೆ ಪ್ರಮುಖ ಹುದ್ದೆಗಳನ್ನು ನೀಡಿದೆ. ನನ್ನನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಿತ್ತು. ವಿಧಾನಸಭೆಯಲ್ಲಿ ವಿರೋಧಪಕ್ಷದ ನಾಯಕನನ್ನಾಗಿ ಮಾಡಿದೆ’ ಎಂದು ಅವರು ಹೇಳಿದರು.

ADVERTISEMENT

ಸಮಾವೇಶದ ಕಡೆಯಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರು ಸಮಾರೋಪ ಭಾಷಣ ಮಾಡುವ ಮುನ್ನ ಅಜಿತ್ ಪವಾರ್‌ ಅವರು ಭಾಷಣ ಮಾಡಬೇಕಿತ್ತು. ಅವರ ಹೆಸರನ್ನು ಕೂಗಲಾಯಿತು ಆದರೆ ಆ ವೇಳೆ ಅವರು ಸ್ಥಳದಲ್ಲಿ ಉಪಸ್ಥಿತರಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.