ADVERTISEMENT

ಖ್ಯಾತ ಸಂಶೋಧಕಿ, ಲೇಖಕಿ ಗೇಲ್‌ ಒಂವೆಡ್ತ್‌ ನಿಧನ

ಪಿಟಿಐ
Published 25 ಆಗಸ್ಟ್ 2021, 9:58 IST
Last Updated 25 ಆಗಸ್ಟ್ 2021, 9:58 IST
ಡಾ.ಗೇಲ್ ಒಂವೆಡ್ತ್‌ಚಿತ್ರ:Nitin Kandharkar (@imNRK17)
ಡಾ.ಗೇಲ್ ಒಂವೆಡ್ತ್‌ಚಿತ್ರ:Nitin Kandharkar (@imNRK17)   

ಪುಣೆ:ಖ್ಯಾತ ಸಂಶೋಧಕಿ ಮತ್ತು ಶ್ರಮಿಕ್ ಮುಕ್ತಿ ದಳದ ಸಹ ಸಂಸ್ಥಾಪಕಿ ಡಾ.ಗೇಲ್‌ ಒಂವೆಡ್ತ್‌ (81) ಅವರು ದೀರ್ಘಕಾಲದ ಅನಾರೋಗ್ಯದಿಂದಾಗಿ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕಾಸೆಗಾಂವ್ ಗ್ರಾಮದಲ್ಲಿ ಬುಧವಾರ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೃತರಿಗೆ ಪತಿ ಭರತ್‌ ಪಟ್ನಾಗರ್, ಮಗಳು, ಅಳಿಯ ಮತ್ತು ಮೊಮ್ಮಗಳಿದ್ದಾರೆ.

ಅಮೆರಿಕ ಮೂಲದ ‌ ಗೇಲ್‌, ಅಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ ನಂತರ, ಪಿಎಚ್‌.ಡಿ ಅಧ್ಯಯನಕ್ಕಾಗಿ ಭಾರತಕ್ಕೆ ಬಂದರು.ಇಲ್ಲಿ ಹಲವು ಸಾಮಾಜಿಕ ಚಳವಳಿಗಳ ಮೇಲೆ ಅಧ್ಯಯನ ನಡೆಸಿದರು. ನಂತರ ಮಹಾತ್ಮ ಪುಲೆ ಅವರ ಕೆಲಸಗಳ ಮೇಲೂ ಅಧ್ಯಯನ ಕೈಗೊಂಡರು.

ADVERTISEMENT

ಸಂಶೋಧನೆಯ ಅವಧಿಯಲ್ಲಿ ಗೇಲ್ ಅವರು ‘ಪಶ್ಚಿಮ ಭಾರತದಲ್ಲಿ‌ ಬ್ರಾಹ್ಮಣೇತರ ಚಳವಳಿ‘ ಕುರಿತು ಪ್ರಬಂಧ ರಚಿಸಿದರು. ಶ್ರಮಿಕ ಮುಕ್ತಿ ದಳದ ಸಹ ಸಂಸ್ಥಾಪಕರಾಗಿದ್ದ ಡಾ.ಗೇಲ್‌, ಪತಿ, ಹೋರಾಟಗಾರ ಭರತ್ ಪಟ್ನಾಗರ್ ಜೊತೆಗೂಡಿ ತಮ್ಮ ಇಡೀ ಬದುಕನ್ನು ದಮನಿತ ಸಮುದಾಯಗಳ ಪರ ಹೋರಾಟಗಳಿಗೆ, ದಮನಿತ ಸಮುದಾಯಗಳ ಅಧ್ಯಯನಕ್ಕೆ ಮೀಸಲಿಟ್ಟರು. 1983ರಲ್ಲಿ ಭಾರತದ ಪೌರತ್ವ ಪಡೆದರು.

ಗೇಲ್ ಅವರು, ‘ಕಲ್ಚರಲ್‌ ರಿವೋಲ್ಟ್‌ ಇನ್ ಕೊಲೊನಿಯಲ್ ಸೊಸೈಟಿ – ದಿನ ನಾನ್–ಬ್ರಾಹ್ಮಿನ್ ಮೂವೆಮೆಂಟ್ ಇನ್ ವೆಸ್ಟರ್ನ್‌ ಇಂಡಿಯಾ‘, ‘ಸೀಕಿಂಗ್ ಬೇಗಂಪುರ‘, ‘ಬುದ್ಧಿಸಂ ಇನ್ ಇಂಡಿಯಾ‘, ‘ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌‘ ಸೇರಿದಂತೆ 25ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ.

ಗೇಲ್ ನಿಧನಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಸಂತಾಪ ಸೂಚಿಸಿದ್ದಾರೆ. ‘ಭಾರತದ ವಿವಿಧ ಸಾಮಾಜಿಕ ಚಳವಳಿ, ಸಂತ ಸಾಹಿತ್ಯ ಮತ್ತು ಜನಪದ ಸಂಸ್ಕೃತಿ ಮತ್ತು ಮಹಿಳೆಯರ ಹಕ್ಕುಗಳ ಕುರಿತು ಗೇಲ್ ಕೈಗೊಂಡಿರುವ ಕಾರ್ಯಗಳು ಸದಾ ಸ್ಮರಣೀಯ‘ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.