ADVERTISEMENT

ಸಾಮಾಜಿಕ ಕಾರ್ಯಕರ್ತೆ ಮೇರಿ ರಾಯ್ ನಿಧನ

ಪಿಟಿಐ
Published 1 ಸೆಪ್ಟೆಂಬರ್ 2022, 12:46 IST
Last Updated 1 ಸೆಪ್ಟೆಂಬರ್ 2022, 12:46 IST
ಮೇರಿ ರಾಯ್ (ಚಿತ್ರಕೃಪೆ: ಟ್ವಿಟರ್)
ಮೇರಿ ರಾಯ್ (ಚಿತ್ರಕೃಪೆ: ಟ್ವಿಟರ್)   

ಕೊಟ್ಟಾಯಂ: ಖ್ಯಾತ ಶಿಕ್ಷಣ ತಜ್ಞೆ, ಸಾಮಾಜಿಕ ಕಾರ್ಯಕರ್ತೆ ಮೇರಿ ರಾಯ್ (89) ಅವರು ವಯೋಸಹಜ ಕಾಯಿಲೆಗಳಿಂದ ಗುರುವಾರ ನಿಧನರಾದರು.

ಅವರಿಗೆ ಮಗಳು, ಲೇಖಕಿ, ಬೂಕರ್ ಪ್ರಶಸ್ತಿ ವಿಜೇತೆ ಅರುಂಧತಿ ರಾಯ್ ಮತ್ತು ಮಗ ಲಲಿತ್ ರಾಯ್ ಇದ್ದಾರೆ. ಮೇರಿ ಅವರು ಪಲ್ಲಿಕೂಡಂ ಶಾಲೆಯ ಸ್ಥಾಪಕರೂ ಹೌದು.

ಕೊಟ್ಟಾಯಂ ಸಮೀಪದ ಐಮನಂ ಗ್ರಾಮದಲ್ಲಿ 1933ರಲ್ಲಿ ಜನಿಸಿದ ಮೇರಿ ಅವರು ದೆಹಲಿಯಲ್ಲಿ ಶಾಲಾ ಶಿಕ್ಷಣ ಹಾಗೂ ಚೆನ್ನೈನಲ್ಲಿ ಕಾಲೇಜು ಪದವಿ ಪಡೆದರು. ಬಳಿಕ ಕೋಲ್ಕತ್ತದ ಕಂಪನಿಯೊಂದರಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡುತ್ತಿದ್ದಾಗ ಅವರು ರಾಜೀಬ್ ರಾಯ್ ಅವರನ್ನು ವಿವಾಹವಾದರು.

ADVERTISEMENT

1980ರಲ್ಲಿ ಕೇರಳದ ಸಿರಿಯನ್ ಕ್ರಿಶ್ಚಿಯನ್ ಕುಟುಂಬಗಳ ಪಿತ್ರಾರ್ಜಿತ ಆಸ್ತಿಯಲ್ಲಿ ಮಹಿಳೆಯರಿಗೆ ಲಿಂಗ ಸಮಾನತೆಯನ್ನು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಮೇರಿ ಅವರು ಕಾನೂನು ಹೋರಾಟವನ್ನು ಪ್ರಾರಂಭಿಸಿದರು. 1986ರಲ್ಲಿ ಕೋರ್ಟ್ ಇವರ ಮನವಿಯನ್ನು ಪುರಸ್ಕರಿಸಿತು.

ತಿರುವಾಂಕೂರು ರಾಜಪ್ರಭುತ್ವದ 1916ರ ತಿರುವಾಂಕೂರ್ ಉತ್ತರಾಧಿಕಾರ ಕಾಯ್ದೆಯಲ್ಲಿನ ನಿಬಂಧನೆಗಳನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್, ಮಹಿಳೆಯರಿಗೂ ಅವರ ತಂದೆಯ ಆಸ್ತಿಯಲ್ಲಿ ಸಮಾನ ಹಕ್ಕುಗಳಿವೆ ಎಂದು ತೀರ್ಪು ನೀಡಿತ್ತು.

ಮೇರಿ ಅವರ ಪಾರ್ಥಿವ ಶರೀರವನ್ನು ಪಲ್ಲಿಕೂಡಂ ಕ್ಯಾಂಪಸ್‌ನಲ್ಲಿರುವ ಅವರ ನಿವಾಸದಲ್ಲಿ ಸೆ. 2ರ ಮಧ್ಯಾಹ್ನದ ತನಕ ಸಾರ್ವಜನಿಕ ವೀಕ್ಷಣೆ ಇರಿಸಲಾಗುವುದು. ಬಳಿಕ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.