ನವದೆಹಲಿ: ಬೆಳಿಗ್ಗೆ 5 ಗಂಟೆಯಿಂದ ಮಧ್ಯಾಹ್ನ 2 ಗಂಟೆಯ ನಡುವೆ ಹೊರಡುವ ರೈಲುಗಳಿಗೆ ಸೀಟು ಕಾಯ್ದಿರಿಸಿದ ಪಟ್ಟಿಯನ್ನು ಹಿಂದಿನ ದಿನ ರಾತ್ರಿ 9 ಗಂಟೆಗೆ ಮತ್ತು ಇತರ ಅವಧಿಯಲ್ಲಿ ಸಂಚರಿಸುವ ರೈಲುಗಳಿಗೆ ಎಂಟು ಗಂಟೆ ಮುನ್ನ ಈ ಪಟ್ಟಿಯನ್ನು ಸಿದ್ಧಪಡಿಸಲಾಗುವುದು ಎಂದು ರೈಲ್ವೆ ತಿಳಿಸಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಈ ಬದಲಾವಣೆ ಮಾಡಲಾಗಿದೆ ಎಂದು ರೈಲ್ವೆ ಸಚಿವಾಲಯ ಬುಧವಾರ ಹೊರಡಿಸಿರುವ ಸುತ್ತೋಲೆಯಲ್ಲಿ ತಿಳಿಸಿದೆ.
2015ರಿಂದಲೂ, ರೈಲು ಹೊರಡುವ ಸಮಯಕ್ಕೂ ನಾಲ್ಕು ಗಂಟೆಗಳ ಮುನ್ನ ಸೀಟು ಕಾಯ್ದಿರಿಸಿದ ಮೊದಲ ಪಟ್ಟಿಯು ಸಿದ್ಧಪಡಿಸಲಾಗುತ್ತಿತ್ತು. ಇದೀಗ ಈ ನಿಯಮದಲ್ಲಿ ಬದಲಾವಣೆ ತರಲಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ವಲಯಗಳ ಅಧಿಕಾರಿಗಳಿಗೆ ಸೂಚಿಸಿರುವ ಸಚಿವಾಲಯ, ಇದು ಯಾವ ದಿನಾಂಕದಿಂದ ಜಾರಿಯಾಗಬೇಕು ಎಂಬುದನ್ನು ಪ್ರಸ್ತಾಪಿಸಿಲ್ಲ. ಅಲ್ಲದೆ ಎರಡನೇ ಪಟ್ಟಿ ತಯಾರಿಕೆ ಕುರಿತು ಯಾವುದೇ ಬದಲಾವಣೆಯನ್ನೂ ಅದು ಉಲ್ಲೇಖಿಸಿಲ್ಲ.
ಪಟ್ಟಿ ಬಿಡುಗಡೆಯಾದ ಬಳಿಕವೂ ಸೀಟುಗಳು ಬಾಕಿ ಉಳಿದಿದ್ದರೆ, ಪ್ರಚಲಿತ ಬುಕಿಂಗ್ ಸೌಲಭ್ಯ ಬಳಸಿಕೊಂಡು ಸೀಟುಗಳನ್ನು ಕಾಯ್ದಿರಿಸಬಹುದು. ಎರಡನೇ ಪಟ್ಟಿಯು ರೈಲು ಹೊರಡುವ 30 ನಿಮಿಷ ಮುನ್ನ ಸಿದ್ಧವಾಗುತ್ತದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.