ADVERTISEMENT

ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಆರ್ ವ್ಯಾಲ್ಯೂ ಹೆಚ್ಚಳ: ಮತ್ತೆ ಕೋವಿಡ್ ಏರಿಕೆ

ಕರ್ನಾಟಕ, ಕೇರಳ, ಹಿಮಾಚಲ ಪ್ರದೇಶದಲ್ಲಿಆರ್ ಮೌಲ್ಯ 1ಕ್ಕಿಂತ ಹೆಚ್ಚು ದಾಖಲು

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2021, 1:29 IST
Last Updated 7 ನವೆಂಬರ್ 2021, 1:29 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಕೋವಿಡ್ ಪ್ರಸರಣ ವೇಗವನ್ನು ತಿಳಿಸುವ ‘ಆರ್ ವ್ಯಾಲ್ಯೂ’ ಪ್ರಮಾಣ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಲ್ಲಿ ಮತ್ತೊಮ್ಮೆ ಆತಂಕ ಮೂಡಿಸುವ ರೀತಿಯಲ್ಲಿ ಕೊಂಚ ಏರಿಕೆ ದಾಖಲಿಸಿದೆ. ಬೆಂಗಳೂರು ಸೇರಿದಂತೆ ಕೆಲವು ಮೆಟ್ರೊ ನಗರಗಳಲ್ಲೂ ಆರ್ ವ್ಯಾಲ್ಯೂ ಮಿತಿ ದಾಟುತ್ತಿದೆ.

ಆರ್ ಮೌಲ್ಯ 1 ಎಂಬುದನ್ನು ಕೋವಿಡ್ ಪ್ರಸರಣ ವೇಗದಲ್ಲಿ ಸಮಾಧಾನಕರ ಸಂಖ್ಯೆ ಎಂದು ಪರಿಗಣಿಸಲಾಗುತ್ತದೆ.ಸಾಂಕ್ರಾಮಿಕ ರೋಗವು ಕಡಿಮೆಯಾಗಲು, ಆರ್‌ನ ಮೌಲ್ಯವು ಒಂದಕ್ಕಿಂತ ಕಡಿಮೆಯಿರಬೇಕು.ಉದಾಹರಣೆಗೆ, 1.5 ಆರ್ ಮೌಲ್ಯ ಇದೆ ಎಂದರೆ, 10 ಕೋವಿಡ್ ರೋಗಿಗಳು ಇತರ 15 ಜನರಿಗೆ ಸೋಂಕು ಹರಡಬಹುದು ಎಂದರ್ಥ.

1ಕ್ಕಿಂತ ಹೆಚ್ಚಿನ ಆರ್‌ ಮೌಲ್ಯವನ್ನು ಹೊಂದಿರುವ ಇತರ ಸ್ಥಳಗಳೆಂದರೆ, ದುರ್ಗಾಪೂಜಾ ಆಚರಣೆಗಳಿಗೆ ಸಾಕ್ಷಿಯಾದ ಪಶ್ಚಿಮ ಬಂಗಾಳ. ಕೇರಳ ಮತ್ತು ಹಿಮಾಚಲ ಪ್ರದೇಶಗಳೂ ಅತ್ಯಧಿಕ ಆರ್ ವ್ಯಾಲ್ಯೂ ದಾಖಲಿಸಿವೆ.ತೆಲಂಗಾಣ ಮತ್ತು ಆಂಧ್ರಪ್ರದೇಶಗಳೂ ಈ ಸಾಲಿನಲ್ಲಿವೆ. ಅಸ್ಸಾಂ ಮತ್ತು ತಮಿಳುನಾಡಿನಲ್ಲಿ ಆರ್ ಮೌಲ್ಯ 1ರ ಸನಿಹದಲ್ಲಿದೆ.

ADVERTISEMENT

‘ಆರ್ 1ಕ್ಕೆ ಹತ್ತಿರವಾಗಿರುವುದರಿಂದ ಭಾರತದ ಪರಿಸ್ಥಿತಿ ಸ್ವಲ್ಪ ಕೆಟ್ಟದಾಗಿದೆ. ಇತ್ತೀಚಿನ ದಿನಗಳಲ್ಲಿ ಕೇರಳ, ಹಿಮಾಚಲ ಪ್ರದೇಶ ಹಾಗೂ ಪಶ್ಚಿಮ ಬಂಗಾಳದಲ್ಲಿ ಆರ್ ವ್ಯಾಲ್ಯೂಮತ್ತೆ 1ಕ್ಕಿಂತ ಮೇಲಕ್ಕೆ ಹೋಗಿದೆ. ದೊಡ್ಡ ನಗರಗಳಾದ ಕೋಲ್ಕತ್ತ, ದೆಹಲಿ ಮತ್ತು ಬೆಂಗಳೂರು 1ಕ್ಕಿಂತ ಹೆಚ್ಚು ಆರ್‌ ವ್ಯಾಲ್ಯೂ ದಾಖಲಿಸಿವೆ’ ಎಂದು ಮೊದಲಿನಿಂದಲೂ ತಮ್ಮ ಮಾದರಿಯೊಂದಿಗೆ ಸಾಂಕ್ರಾಮಿಕ ರೋಗವನ್ನು ಯಶಸ್ವಿಯಾಗಿ ಪತ್ತೆಹಚ್ಚುತ್ತಿರುವ ಚೆನ್ನೈನ ಗಣಿತ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಸಿತಾಭ್ರ ಸಿನ್ಹಾ ತಿಳಿಸಿದರು.

ಸಿನ್ಹಾ ಅವರ ಗಣಿತದ ಮಾದರಿಯು ಅಕ್ಟೋಬರ್ 31ರವರೆಗಿನ ದತ್ತಾಂಶ ಒಳಗೊಂಡಿದ್ದು, ದಸರಾ ಹಬ್ಬದವರೆಗಿನ ಚಿತ್ರಣವನ್ನು ಕಟ್ಟಿಕೊಡುತ್ತದೆ. 6 ವಾರಗಳ ಹಿಂದೆ ಭಾರತದ ಆರ್‌ ಮೌಲ್ಯವು ಕುಗ್ಗುತ್ತಿರುವ ಸಾಂಕ್ರಾಮಿಕ ರೋಗವನ್ನು ಸೂಚಿಸುವ ಮಿತಿಗಿಂತ ಕಡಿಮೆಯಾಗಿತ್ತು. ದಸರಾ, ದುರ್ಗಾ ಪೂಜೆ ನಂತರ ಈ ಸಂಖ್ಯೆ ಹೆಚ್ಚಾಗಲು ಪ್ರಾರಂಭಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.