ADVERTISEMENT

ಪುರಿ ಕಾಲ್ತುಳಿತ: 7 ಪೊಲೀಸ್‌ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆದೇಶ

ಪಿಟಿಐ
Published 8 ನವೆಂಬರ್ 2025, 14:24 IST
Last Updated 8 ನವೆಂಬರ್ 2025, 14:24 IST
<div class="paragraphs"><p>ಪುರಿ ಜಗನ್ನಾಥ ದೇಗುಲ</p></div>

ಪುರಿ ಜಗನ್ನಾಥ ದೇಗುಲ

   

ಪಿಟಿಐ ಚಿತ್ರ

ಭುವನೇಶ್ವರ: ಪುರಿಯಲ್ಲಿ ಮೂವರ ಸಾವು ಸಂಭವಿಸಿದ ‌‌ಕಾಲ್ತುಳಿತ ದುರಂತಕ್ಕೆ ಕಾರಣವಾದ ಏಳು ಪೊಲೀಸ್‌ ಅಧಿಕಾರಿಗಳು ಹಾಗೂ ಖಾಸಗಿ ತಂತ್ರಜ್ಞಾನ ಸಂಸ್ಥೆಯೊಂದರ ವಿರುದ್ಧ ಕ್ರಮ ಕೈಗೊಳ್ಳಲು ಒಡಿಶಾ ಸರ್ಕಾರ ಆದೇಶಿಸಿದೆ.

ADVERTISEMENT

ಈ ವರ್ಷದ ಜೂನ್‌ 29ರಂದು ಪುರಿಯಲ್ಲಿ ರಥ ಯಾತ್ರೆಯ ಸಂದರ್ಭದಲ್ಲಿ ಗುಂಡಿಚಾ ದೇವಸ್ಥಾನದ ಆವರಣದಲ್ಲಿ ಕಾಲ್ತುಳಿತ ಸಂಭವಿಸಿ, ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಸಾವಿಗೀಡಾಗಿದ್ದರು. 20 ಮಂದಿ ಗಾಯಗೊಂಡಿದ್ದರು. 

ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಇತ್ತೀಚೆಗೆ ಡಿಜಿಪಿ ಅವರಿಗೆ ಪತ್ರ ಬರೆದಿದ್ದಾರೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರೂ ಆದ ಅನು ಜಾರ್ಜ್‌ ಅವರು ಕಾಲ್ತುಳಿತ ದುರಂತದ ಬಗ್ಗೆ ತನಿಖೆ ನಡೆಸಿ, ನೀಡಿರುವ ಶಿಫಾರಸಿನಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ. 

ಗೃಹ ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಮೋಹನ್‌ ಚರಣ್‌ ಮಝಿ ಅವರಿಗೆ ಅನು ಅವರು ತಮ್ಮ ತನಿಖಾ ವರದಿಯನ್ನು ಜು.31ರಂದು ಸಲ್ಲಿಸಿದರು. 

‘ಜನದಟ್ಟಣೆ ನಿಯಂತ್ರಣಕ್ಕೆಂದು ನಿಯೋಜಿಸಲಾಗಿದ್ದ ಇಬ್ಬರು ಹಿರಿಯ ಪೊಲೀಸ್‌ ಅಧಿಕಾರಿಗಳು, ಘಟನೆ ನಡೆದಾಗ ಸ್ಥಳದಲ್ಲಿ ಹಾಜರಿರಲಿಲ್ಲ. ಇವರು ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ತನಿಖಾ ವರದಿಯಲ್ಲಿ ತಿಳಿಸಲಾಗಿದೆ. ಈಗಾಗಲೇ ಅವರನ್ನು ಅಮಾನತುಗೊಳಿಸಿದ್ದರೂ, ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಶಿಫಾರಸು ಮಾಡಲಾಗಿದೆ. 

ಪುರಿಯಲ್ಲಿರುವ ಇಂಟಿಗ್ರೇಟೆಡ್‌ ಕಮಾಂಡ್‌ ಮತ್ತು ಕಂಟ್ರೋಲ್‌ ಸೆಂಟರ್‌ (ಐಸಿಸಿಸಿ) ಅಡಿಯಲ್ಲಿ ಸ್ಥಾಪಿಸಲಾದ ಕೃತಕ ಬುದ್ಧಿಮತ್ತೆ ಆಧಾರಿತ ಕಣ್ಗಾವಲು ಹಾಗೂ ಜನದಟ್ಟಣೆ ಮೇಲೆ ನಿಗಾ ವಹಿಸುವ ವ್ಯವಸ್ಥೆಯಲ್ಲಿ ಗಂಭೀರ ಲೋಪಗಳು ಕಂಡು ಬಂದಿವೆ ಎಂದು ತನಿಖಾ ವರದಿ ತಿಳಿಸಿದೆ. 

ಮಂಜೂರಾಗಿದ್ದ ಒಟ್ಟು 275 ಕ್ಯಾಮೆರಾಗಳಲ್ಲಿ ಕೇವಲ 123 ಕ್ಯಾಮೆರಾಗಳು ಮಾತ್ರವೇ ಕಾರ್ಯ ನಿರ್ವಹಿಸುತ್ತಿದ್ದವು. ಇದರಿಂದಾಗಿ ಹಲವು ಪ್ರಮುಖ ಸ್ಥಳಗಳಲ್ಲಿ ಕಣ್ಗಾವಲು ಇರಿಸಲು ಸಾಧ್ಯವಾಗಿಲ್ಲ. ಐಸಿಸಿಸಿ ಮಾರಾಟಗಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಹಾಗೂ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ತನಿಖಾ ವರದಿಯಲ್ಲಿ ಶಿಫಾರಸು ಮಾಡಲಾಗಿದೆ. 

ಗುಂಡಿಚಾ ದೇವಾಲಯದ ಬಳಿ ಧಾರ್ಮಿಕ ಆಚರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಬೆಳಗಿನ ಜಾವ 4.20ಕ್ಕೆ ಕಾಲ್ತುಳಿತ ಸಂಭವಿಸಿತು. ಧಾರ್ಮಿಕ ವಿಧಿಯ ವಸ್ತುಗಳಿದ್ದ ಎರಡು ಟ್ರಕ್‌ಗಳು ರಥದ ಸಮೀಪಕ್ಕೆ ಬರಬೇಕಿದ್ದವು. ರಥದ ಸಮೀಪವೇ ಸಾವಿರಾರು ಭಕ್ತರು ಸೇರಿದ್ದರು. ಟ್ರಕ್‌ ಕಾರಣಕ್ಕಾಗಿ ಸ್ಥಳದಲ್ಲಿ ಗಲಿಬಿಲಿ ಉಂಟಾಗಿ ಅವಘಡ ಸಂಭವಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.