ADVERTISEMENT

ಕುಗ್ಗಿದ ಬಿಜೆಡಿ ಶಕ್ತಿ ಹಿಗ್ಗಿದ ಬಿಜೆಪಿ ಬಲ

ಒಡಿಶಾ ಲೋಕಸಭೆ ಚುನಾವಣೆ: 20ರಿಂದ 12 ಸ್ಥಾನಗಳಿಗೆ ಕುಸಿತ

ಪಿಟಿಐ
Published 24 ಮೇ 2019, 20:21 IST
Last Updated 24 ಮೇ 2019, 20:21 IST

ಭುವನೇಶ್ವರ: ಒಡಿಶಾದಲ್ಲಿ ಬಿಜೆಪಿ ತನ್ನ ಬಲವನ್ನು ಹೆಚ್ಚಿಸಿಕೊಂಡಿದೆ. ರಾಜ್ಯದಲ್ಲಿನ 21 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಎಂಟರಲ್ಲಿ ಜಯಗಳಿಸಿದೆ.

2014ರಲ್ಲಿ ಕೇವಲ ಒಂದು ಸ್ಥಾನ ಪಡೆದುಕೊಂಡಿದ್ದ ಬಿಜೆಪಿ, ಈ ಬಾರಿ ಬಿಜು ಜನತಾ ದಳಕ್ಕೆ (ಬಿಜೆಡಿ) ಪ್ರಬಲ ಪೈಪೋಟಿ ನೀಡಿತ್ತು.

2014ರಲ್ಲಿ 20 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದ್ದ ಬಿಜೆಡಿ, ಈ ಸಲ 12 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಕಾಂಗ್ರೆಸ್‌ ಕೇವಲ ಒಂದು ಕ್ಷೇತ್ರದಲ್ಲಿ ಜಯಗಳಿಸಿದೆ.

ADVERTISEMENT

ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್‌ ಪಾತ್ರ ಮತ್ತು ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್‌ ಪಾಂಡಾ ಸೋಲು ಅನುಭವಿಸಿದವರಲ್ಲಿ ಪ್ರಮುಖರಾಗಿದ್ದಾರೆ.

ಪುರಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಡಿಯ ಪಿನಾಕಿ ಮಿಶ್ರಾ ಅವರು ಸಂಬಿತ್‌ ಪಾತ್ರ ಅವರನ್ನು 11,714 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಕೇಂದ್ರಪಾಡಾ ಕ್ಷೇತ್ರದಲ್ಲಿ ಬಿಜೆಪಿಯ ಬೈಜಯಂತ್‌ ಪಾಂಡಾ ಅವರನ್ನು ಬಿಜೆಡಿ ಅಭ್ಯರ್ಥಿ ಮತ್ತು ರಾಜ್ಯಸಭಾ ಸದಸ್ಯ ಅನುಭವ್‌ ಮೊಹಾಂತಿ ಸೋಲಿಸಿದ್ದಾರೆ. 1,52,584 ಮತಗಳ ಅಂತರದಿಂದ ಮೊಹಾಂತಿ ಜಯಗಳಿಸಿದ್ದಾರೆ. 2014ರಲ್ಲಿ ಬಿಜೆಡಿ ಅಭ್ಯರ್ಥಿಯಾಗಿ ಇದೇ ಕ್ಷೇತ್ರದಿಂದ ಪಾಂಡಾ ಆಯ್ಕೆಯಾಗಿದ್ದರು. ಆದರೆ, ಪಕ್ಷದಲ್ಲಿನ ಭಿನ್ನಾಭಿಪ್ರಾಯಗಳಿಂದ ಲೋಕಸಭೆ ಮತ್ತು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.

ಕೇಂದ್ರ ಸಚಿವ ಜುಯಲ್‌ ಉರಾಂವ್‌, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸುರೇಶ್‌ ಪೂಜಾರಿ, ನಿವೃತ್ತ ಅಧಿಕಾರಿ ಅಪರಾಜಿತ್‌ ಸಾರಂಗಿ ಗೆದ್ದ ಪ್ರಮುಖರು.

ಸುಂದರಗಡ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜುಯಲ್‌ ಉರಾಂವ್‌, ಅವರು ಬಿಜೆಡಿ ಅಭ್ಯರ್ಥಿ ಸುನೀತಾ ಬಿಸ್ವಾಲ್‌ ಅವರನ್ನು 2.23 ಲಕ್ಷ ಮತಗಳ ಅಂತರದಿಂದ ಪರಾಭವಗೊಳಿಸಿ ತಮ್ಮ ಸ್ಥಾನ ಉಳಿಸಿಕೊಂಡಿದ್ದಾರೆ. 2014ರಲ್ಲೂ ಇದೇ ಕ್ಷೇತ್ರದಿಂದ ಉರಾಂವ್‌ ಜಯ ಸಾಧಿಸಿದ್ದರು.

ಭುವನೇಶ್ವರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಹಾಗೂ ನಿವೃತ್ತ ಅಧಿಕಾರಿ ಅಪರಾಜಿತ್ ಸಾರಂಗಿ ಅವರು ಬಿಜೆಡಿ ಅಭ್ಯರ್ಥಿ ಅರುಪ್‌ ಮೋಹನ್‌ ಪಟ್ನಾಯಕ್‌ ಅವರನ್ನು ಪರಾಭವಗೊಳಿಸಿದ್ದಾರೆ. ಅರುಪ್‌ ಮೋಹನ್‌ ಪಟ್ನಾಯಕ್‌ ಮುಂಬೈ ಪೊಲೀಸ್‌ ಆಯುಕ್ತರಾಗಿದ್ದರು.

ಕಟಕ್‌ ಕ್ಷೇತ್ರದಲ್ಲಿ ಒಡಿಶಾದ ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಪ್ರಕಾಶ್‌ ಮಿಶ್ರಾ ಅವರನ್ನು ಬಿಜೆಡಿಯ ಬರ್‌ತ್ರುಹರಿ ಮಹತಾಬ್‌ 1.21 ಲಕ್ಷ ಮತಗಳ ಅಂತರದಿಂದ ಸೋಲಿಸಿದ್ದಾರೆ.

ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕೊರಪುಟ್‌ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ ಗೆಲುವು ಸಾಧಿಸಿದೆ.

ಕಾಂಗ್ರೆಸ್‌ ಅಭ್ಯರ್ಥಿ ಸಪ್ತಗಿರಿ ಉಲಾಕಾ ಅವರು ಬಿಜೆಡಿಯ ಕೌಸಲ್ಯಾ ಹಿಕಾಕಾ ಅವರನ್ನು 3,613 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ.

***

ಒಟ್ಟು ಲೋಕಸಭಾ ಕ್ಷೇತ್ರಗಳು 21

ಬಿಜೆಡಿ 12

ಬಿಜೆಪಿ 8

ಕಾಂಗ್ರೆಸ್‌ 1

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.