ADVERTISEMENT

ಒಡಿಶಾ ರೈಲು ದುರಂತ: ಬಾಲಸೋರ್‌ನಲ್ಲಿ ಭರದಿಂದ ಸಾಗಿದ ರೈಲು ಹಳಿ ಮರು ನಿರ್ಮಾಣ ಕಾರ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಜೂನ್ 2023, 3:19 IST
Last Updated 4 ಜೂನ್ 2023, 3:19 IST
   

ಬಾಲಸೋರ್/ಭುವನೇಶ್ವರ: ಒಡಿಶಾದ ಬಾಲಸೋರ್‌ನಲ್ಲಿ ಎರಡು ಪ್ರಯಾಣಿಕ ರೈಲುಗಳು ಮತ್ತು ಸರಕು ಸಾಗಣೆ ರೈಲಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ 288 ಪ್ರಯಾಣಿಕರು ಮೃತಪಟ್ಟಿದ್ದು, ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಸರಕು ಸಾಗಣೆ ರೈಲಿನ ಎರಡು ಬೋಗಿಗಳೂ ಸೇರಿದಂತೆ ಪ್ರಯಾಣಿಕ ರೈಲುಗಳ ಮಗುಚಿ ಬಿದ್ದ ಬೋಗಿಗಳನ್ನು ಹೊರತೆಗೆಯಲಾಗಿದ್ದು, ಒಂದು ಕಡೆಯಿಂದ ರೈಲು ಹಳಿಗೆ ಸಂಪರ್ಕ ಕಲ್ಪಿಸುವ ಕೆಲಸ ನಡೆಯುತ್ತಿದೆ. ಆದಷ್ಟು ಬೇಗ ಕಾಮಗಾರಿ ಮುಗಿಸಲಾಗುವುದು ಎಂದು ಆಗ್ನೇಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ (ಸಿಪಿಆರ್‌ಒ) ಆದಿತ್ಯ ಕುಮಾರ್ ಅವರು ಸುದ್ದಿಸಂಸ್ಥೆ ‘ಎಎನ್‌ಐ’ಗೆ ತಿಳಿಸಿದ್ದಾರೆ.

ಬಾಲಸೋರ್‌ನಲ್ಲಿ ರೈಲು ಹಳಿ ಮರು ನಿರ್ಮಾಣ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದ್ದು, ಘಟನಾ ಸ್ಥಳದಲ್ಲಿ ಮರು ನಿರ್ಮಾಣ ಕಾರ್ಯವನ್ನು ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ರೈಲ್ವೆ ಸಚಿವಾಲಯ ಟ್ವೀಟ್‌ ಮಾಡಿದೆ.

ADVERTISEMENT

ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್), ಒಡಿಶಾ ವಿಪತ್ತು ನಿರ್ವಹಣಾ ಪಡೆ (ಒಡಿಆರ್‌ಎಫ್) ಸೇರಿದಂತೆ ಅಗ್ನಿಶಾಮಕದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ರೈಲು ದುರಂತದಲ್ಲಿ ಮೃತಪಟ್ಟವರನ್ನು ಮತ್ತು ಗಾಯಗೊಂಡವರ ಸ್ಥಳಾಂತರಕ್ಕಾಗಿ ಭಾರತೀಯ ವಾಯುಪಡೆ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ.

ಬಾಲಸೋರ್‌ ಜಿಲ್ಲಾ ಆಸ್ಪತ್ರೆ ಹಾಗೂ ಇತರ ಆಸ್ಪತ್ರೆಗಳಲ್ಲಿ ಗಾಯಾಳುಗಳನ್ನು ದಾಖಲಿಸಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.

ಬೆಂಗಳೂರು– ಹೌರಾ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌, ಕೋರೊಮಂಡಲ್‌ ಎಕ್ಸ್‌ಪ್ರೆಸ್‌ ಮತ್ತು ಸರಕು ಸಾಗಣೆ ರೈಲುಗಳ ಮಧ್ಯೆ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಾದ ಸಾವು– ನೋವಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಅವರು ರಾಜ್ಯ ದಲ್ಲಿ ಶನಿವಾರ ಶೋಕಾಚರಣೆ ಘೋಷಿಸಿದ್ದರು.

‘ರಕ್ಷಣಾ ಕಾರ್ಯದಲ್ಲಿ ಎನ್‌ಡಿಆರ್‌ಎಫ್‌, ಒಡಿಶಾ ವಿಪತ್ತು ಕ್ಷಿಪ್ರ ಕಾರ್ಯಪಡೆ (ಒಡಿಆರ್‌ಎಎಫ್), ಅಗ್ನಿಶಾಮಕ ದಳ ಸಿಬ್ಬಂದಿ ತೊಡಗಿದ್ದು, ರೈಲು ಬೋಗಿಗಳಡಿ ಸಿಲುಕಿರುವವರನ್ನು ರಕ್ಷಿಸುವ ಹಾಗೂ ಮೃತದೇಹಗಳನ್ನು ಹೊರಗೆ ತೆಗೆಯುವ ಕಾರ್ಯ ಶನಿವಾರದವರೆಗೆ ನಡೆಯಿತು’ ಎಂದು ಒಡಿಶಾ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ಕೆ.ಜೇನಾ ತಿಳಿಸಿದ್ದಾರೆ.

ಇದನ್ನೂ ಓದಿ... ಒಡಿಶಾ ರೈಲು ದುರಂತ: ಮೃತರ ಕುಟುಂಬಕ್ಕೆ ಅಮೆರಿಕ ಅಧ್ಯಕ್ಷ ಬೈಡನ್ ಸೇರಿ ಗಣ್ಯರಿಂದ ಸಂತಾಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.