ADVERTISEMENT

ಅಯೋಧ್ಯೆಗೆ ಭಕ್ತರು ಯಾವಾಗಲಾದರೂ ತೆರಳಬಹುದು: ಬಿಜೆಪಿಗೆ ಕಾಂಗ್ರೆಸ್‌ ತಿರುಗೇಟು

ಶಂಕರಾಚಾರ್ಯರ ಸಲಹೆ ಕಡೆಗಣನೆ: ಕಾಂಗ್ರೆಸ್‌ ಆರೋಪ

​ಪ್ರಜಾವಾಣಿ ವಾರ್ತೆ
Published 12 ಜನವರಿ 2024, 15:42 IST
Last Updated 12 ಜನವರಿ 2024, 15:42 IST
<div class="paragraphs"><p>ಕಾಂಗ್ರೆಸ್‌ </p></div>

ಕಾಂಗ್ರೆಸ್‌

   

ನವದೆಹಲಿ: ರಾಮಲಲ್ಲಾ ಪ್ರತಿಷ್ಠಾಪನೆಯ ವಿಷಯವನ್ನು ಬಿಜೆಪಿಯು ರಾಜಕೀಯಕರಣಗೊಳಿಸಿದೆ.  ಧಾರ್ಮಿಕ ಪ್ರಕ್ರಿಯೆಗಳನ್ನು ಅನುಸರಿಸದೆ ಮತ್ತು ಶಂಕರಾಚಾರ್ಯ ಅವರ ಸಲಹೆಗಳನ್ನು ಕಡೆಗಣಿಸಿ ಈ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ಕಾಂಗ್ರೆಸ್‌ ಶುಕ್ರವಾರ ಆರೋಪಿಸಿದೆ.

ಧರ್ಮವು ವೈಯಕ್ತಿಕ ನಂಬಿಕೆಯ ವಿಚಾರ. ಯಾರು ಬೇಕಾದರೂ ಅವರಿಗೆ ಅನಿಸಿದಾಗ ಅಯೋಧ್ಯೆಗೆ ತೆರಳಬಹುದಾಗಿದೆ ಎಂದು ಪಕ್ಷವು ಒತ್ತಿ ಹೇಳಿದೆ. ಅಲ್ಲದೆ ಬಿಜೆಪಿ– ಆರ್‌ಎಸ್‌ಎಸ್‌ ಈ ಕಾರ್ಯಕ್ರಮವನ್ನು ‘ರಾಜಕೀಯ ವ್ಯವಹಾರದ’ ವಿಷಯವಾಗಿ ಪರಿವರ್ತಿಸಿದ್ದರಿಂದ ಕಾಂಗ್ರೆಸ್‌ನ ಉನ್ನತ ನಾಯಕರು ಸಮಾರಂಭದಿಂದ ದೂರ ಉಳಿದಿದ್ದಾರೆ ಎಂದೂ ಸ್ಪಷ್ಟಪಡಿಸಿದೆ.

ADVERTISEMENT

ಪಕ್ಷವು ಈಗಾಗಲೇ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ. ಬಿಜೆಪಿ ಮತ್ತೆ ಮತ್ತೆ ಈ ವಿಷಯವನ್ನು ಯಾಕೆ ಪ್ರಸ್ತಾಪಿಸುತ್ತಿದೆ? ರಾಮನ ಭಕ್ತರು ಅವರಿಗೆ ಬೇಕೆನಿಸಿದಾಗ ಅಯೋಧ್ಯೆಗೆ ಹೋಗುತ್ತಾರೆ. ಬಿಜೆಪಿಯು ಪಿತೂರಿಯ ಅಂಗವಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದೆ ಎಂದು ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

‘ಇದು ಧಾರ್ಮಿಕ ಕಾರ್ಯಕ್ರಮವೇ ಆಗಿದ್ದರೆ, ಶಂಕರಾಚಾರ್ಯರು ನೀಡಿದ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ಧಾರ್ಮಿಕ ಪ್ರಕ್ರಿಯೆಗಳು ನಡೆಯುತ್ತಿರಲಿಲ್ಲವೇ? ನನ್ನ ಮತ್ತು ನನ್ನ ದೇವರ ನಡುವೆ ರಾಜಕೀಯ ಪಕ್ಷದ ಕಾರ್ಯಕರ್ತರು ಮಧ್ಯಸ್ಥಿಕೆ ವಹಿಸುವುದನ್ನು ನಾನೇಕೆ ಸಹಿಸಲಿ?’ ಎಂದು ಕಾಂಗ್ರೆಸ್‌ ಮಾಧ್ಯಮ ವಿಭಾಗದ ಮುಖ್ಯಸ್ಥ ಪವನ್‌ ಖೇರಾ ಪ್ರಶ್ನಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡೇ ಜನವರಿ 22 ರ ದಿನವನ್ನು ನಿಗದಿಪಡಿಸಲಾಗಿದೆ ಎಂದಿದ್ದಾರೆ.

ಶಂಕರಾಚಾರ್ಯರ ವಿರುದ್ಧ ಬಿಜೆಪಿಯ ಐಟಿ ಘಟಕ ಅಭಿಯಾನ ಆರಂಭಿಸಿದೆ ಎಂದು ಆರೋಪಿಸಿದ ಖೇರಾ ಅವರು ಈ ಕಾರ್ಯಕ್ರಮದಲ್ಲಿ ಧರ್ಮ ಇಲ್ಲ, ನಂಬಿಕೆ ಇಲ್ಲ. ಇರುವುದು ರಾಜಕೀಯ ಮಾತ್ರ ಎಂದಿದ್ದಾರೆ.

‘ಒಬ್ಬ ವ್ಯಕ್ತಿಯ ರಾಜಕೀಯ ನಾಟಕಕ್ಕಾಗಿ ನಮ್ಮ ದೇವರು ಮತ್ತು ನಂಬಿಕೆಯೊಂದಿಗೆ ಆಟವಾಡಲು ನಾವು ಬಿಡುವುದಿಲ್ಲ. ಏಪ್ರಿಲ್‌ನಲ್ಲಿ ರಾಮನವಮಿಯ ದಿನದಂದು ಪ್ರತಿಷ್ಠಾಪನೆ ಮಾಡಬೇಕೆಂದು ಧಾರ್ಮಿಕ ನಾಯಕರು ಬಯಸಿದ್ದರು’ ಎಂದೂ ಅವರು ಹೇಳಿದ್ದಾರೆ.

ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್‌ ವೇದಿಕೆಯ ಮುಖ್ಯಸ್ಥೆ ಸುಪ್ರಿಯಾ ಶ್ರೀನೇತ್‌ ಅವರು, ಧಾರ್ಮಿಕ ವಿಚಾರದಲ್ಲಿ ರಾಜಕೀಯ ಮಾಡುವುದು ತಪ್ಪು. ನಾವು ಅಯೋಧ್ಯೆಗೆ ಹೋಗಬೇಡಿ ಎಂದು ಹೇಳುತ್ತಿಲ್ಲ. 22ರಂದು ನಡೆಯುವ ಕಾರ್ಯಕ್ರಮಕ್ಕೆ ನಾವು ಹೋಗುತ್ತಿಲ್ಲ. ಏಕೆಂದರೆ ಅದನ್ನು ರಾಜಕೀಯಕರಣಗೊಳಿಸಲಾಗಿದೆ. ಈ ಕಾರ್ಯಕ್ರಮ ಪ್ರಧಾನಿ ಮೋದಿ ಮತ್ತು ಆರ್‌ಎಸ್‌ಎಸ್‌ ಅಧ್ಯಕ್ಷ ಮೋಹನ್‌ ಭಾಗವತ್‌ ಸಮ್ಮುಖದಲ್ಲಿ ನಡೆಯುತ್ತಿದೆ ಎಂದು ಹೇಳಿದ್ದಾರೆ.

‘ವೈಯಕ್ತಿಕ ನಂಬಿಕೆಯೇ ನಮಗೆ ಎಲ್ಲಕ್ಕಿಂತ ಹೆಚ್ಚು. ನಾವು ದೇವಾಲಯ, ಚರ್ಚ್‌ಗಳು, ಮಸೀದಿಗಳಿಗೆ ಹೋಗುತ್ತೇವೆ. ನಮ್ಮ ನಂಬಿಕೆಗಳಿಗೆ ತಕ್ಕಂತೆ ನಾವು ಹೋಗುತ್ತಲೇ ಇರುತ್ತೇವೆ. ಇದರಲ್ಲಿ ಯಾವುದೇ ನಿರ್ಬಂಧ ಇಲ್ಲ. ಉತ್ತರಪ್ರದೇಶ ಕಾಂಗ್ರೆಸ್‌ ಸಮಿತಿಯು ಈಗಾಗಲೇ ಜ. 15ರಂದು ರಾಜ್ಯದ ನಾಯಕರು ಅಯೋಧ್ಯೆಗೆ ಭೇಟಿ ನೀಡುವರು ಎಂದು ಪ್ರಕಟಿಸಿದೆ’ ಎಂದು ಅವರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.