ನವದೆಹಲಿ: 1971ರ ಯುದ್ಧದಲ್ಲಿ ಅಸಾಧಾರಣ ಧೈರ್ಯ ಪ್ರದರ್ಶಿಸಿದ್ದ ಮಹಿಳೆಯರ ಗುಂಪೊಂದು ನೀಡಿದ್ದ ಸಿಂಧೂರ ಸಸಿಯನ್ನು ಪ್ರಧಾನಿ ನರೇಂದ್ರ ಮೋದಿ ವಿಶ್ವ ಪರಿಸರ ದಿನವಾದ ಇಂದು ತಮ್ಮ ನಿವಾಸದ ಗಾರ್ಡನ್‌ನಲ್ಲಿ ನೆಟ್ಟಿದ್ದಾರೆ.
ಈ ಸಸಿಯನ್ನು ಇತ್ತೀಚಿನ ಆಪರೇಷನ್ ಸಿಂಧೂರಕ್ಕೆ ಗೌರವವಾರ್ಥಕವಾಗಿಯೂ ಪರಿಗಣಿಲಾಗುತ್ತಿದೆ.
ಈ ಸಸಿಯು ದೇಶದ ಮಹಿಳೆಯರ ಶೌರ್ಯ ಮತ್ತು ಸ್ಫೂರ್ತಿಯ ಬಲವಾದ ಸಂಕೇತವಾಗಿ ಉಳಿಯುತ್ತದೆ ಎಂದು ಮೋದಿ ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
1971ರ ಯುದ್ಧದಲ್ಲಿ ಅಸಾಧಾರಣ ಧೈರ್ಯತೋರಿದ್ದ ಮಹಿಳೆಯರ ಗುಂಪು ಇತ್ತೀಚೆಗೆ ಗುಜರಾತ್‌ನ ಕಚ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತಮ್ಮನ್ನು ಭೇಟಿಯಾಗಿ ಸಿಂಧೂರ ಸಸಿಗಳನ್ನು ನೀಡಿತ್ತು ಎಂದು ಅವರು ತಿಳಿಸಿದ್ದಾರೆ.
ಸಸಿಗಳನ್ನು ಸ್ಪರ್ಶಿಸಿ, ಅವುಗಳನ್ನು ದೆಹಲಿಯ ತಮ್ಮ ಲೋಕ ಕಲ್ಯಾಣ ಮಾರ್ಗದ ಅಧಿಕೃತ ನಿವಾಸದ ಗಾರ್ಡನ್‌ನಲ್ಲಿ ನೆಡುವುದಾಗಿ ಮೋದಿ ಮಹಿಳೆಯರಿಗೆ ಭರವಸೆ ನೀಡಿದ್ದರು.
ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಭಾರತ ನಡೆಸಿದ ಮಿಲಿಟರಿ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ ಎಂದು ಹೆಸರಿಡಲಾಗಿತ್ತು. ಭಯೋತ್ಪಾದಕರು ಪುರುಷರನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಿದ್ದರು. ಅದರ ಪ್ರತೀಕಾರ ತೀರಿಸಿಕೊಳ್ಳುವ ಬದ್ಧತೆಯನ್ನು ತಿಳಿಸಲು ಸಸಿಯ ಆಯ್ಕೆ ಮಹತ್ವದ್ದಾಗಿದೆ ಎಂದು ವರದಿ ತಿಳಿಸಿದೆ.
ವಿಶ್ವ ಪರಿಸರ ದಿನದ ಅಂಗವಾಗಿ ಎಕ್ಸ್‌ನಲ್ಲಿ ವಿಡಿಯೊ ಸಂದೇಶ ಹಂಚಿಕೊಂಡಿರುವ ಮೋದಿ, ಜಾಗತಿಕ ಹವಾಮಾನದ ರಕ್ಷಣೆಗಾಗಿ ಪ್ರತಿಯೊಂದು ದೇಶವು ಸ್ವಹಿತಾಸಕ್ತಿಯನ್ನು ಮೀರಿ ನಿಲ್ಲಬೇಕಾಗುತ್ತದೆ ಎಂದು ಕರೆ ನೀಡಿದ್ದಾರೆ.
ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವುದು ಈ ವರ್ಷದ ವಿಶ್ವ ಪರಿಸರ ದಿನದ ವಿಷಯವಾಗಿದೆ. ಭಾರತವು ಕಳೆದ ನಾಲ್ಕೈದು ವರ್ಷಗಳಿಂದ ನಿರಂತರವಾಗಿ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ಎಚ್ಚರಿಕೆಯಿಂದ ಸಂಪನ್ಮೂಲಗಳ ಬಳಕೆ ಮತ್ತು ಸುಸ್ಥಿರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದನ್ನು ಪ್ರತಿಪಾದಿಸುವ ಮಿಷನ್ LiFE ಪ್ರಪಂಚದಾದ್ಯಂತ ಸಾರ್ವಜನಿಕ ಚಳವಳಿಯಾಗುತ್ತಿದೆ ಎಂದು ಮೋದಿ ಹೇಳಿದ್ದಾರೆ.
ಲಕ್ಷಾಂತರ ಜನರು ತಮ್ಮ ದೈನಂದಿನ ಜೀವನದಲ್ಲಿ ಪ್ಲಾಸ್ಟಿಕ್‌ನ ಕಡಿಮೆ ಬಳಕೆ, ಮರುಬಳಕೆಯನ್ನು ಅಳವಡಿಸಿಕೊಂಡಿದ್ದಾರೆ. ನಮ್ಮ ಗ್ರಹವನ್ನು ರಕ್ಷಿಸುವ ಮತ್ತು ಪರಿಸರ ಸವಾಲುಗಳನ್ನು ನಿವಾರಿಸುವ ಕಡೆಗೆ ಜನರು ತಮ್ಮ ಪ್ರಯತ್ನಗಳನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿದ್ದಾರೆ.
ನಮ್ಮ ಪರಿಸರವನ್ನು ಹಸಿರು ಮತ್ತು ಉತ್ತಮಗೊಳಿಸಲು ತಳಮಟ್ಟದಲ್ಲಿ ಕೆಲಸ ಮಾಡುವ ಎಲ್ಲರನ್ನು ನಾನು ಅಭಿನಂದಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.