
ನವದೆಹಲಿ: ಜೆಡಿಯು ನಾಯಕ ನಿತೀಶ್ ಕುಮಾರ್ ಅವರು ಮತ್ತೊಮ್ಮೆ ಮುಖ್ಯಮಂತ್ರಿ ಪಟ್ಟ ಏರುವಂತಾಗಲು ಬಿಹಾರದ ಮಹಿಳಾ ಮತದಾರರು ನಿರ್ಣಾಯಕ ಪಾತ್ರವಹಿಸಿದ್ದಾರೆ. ಎನ್‌ಡಿಎ ಮೈತ್ರಿಕೂಟವು ಐತಿಹಾಸಿಕ ಗೆಲುವು ಸಾಧಿಸಿ, ಸರ್ಕಾರ ರಚಿಸಲು ಹಕ್ಕು ಸ್ಥಾಪಿಸುವಂತಾಗಲು ಕೂಡ ಮಹಿಳಾ ಮತದಾರರ ಬೆಂಬಲದ ಮುದ್ರೆ ಇರುವುದನ್ನು ಕೂಡ ನಿರಾಕರಿಸಲಾಗದು.
ಬಿಹಾರದಲ್ಲಿ ನಡೆದ ಕಳೆದ ಐದು ವಿಧಾನಸಭೆ ಚುನಾವಣೆಗಳಲ್ಲಿನ ಮತದಾನ ಪ್ರಮಾಣವನ್ನು ಅವಲೋಕಿಸಿದರೆ, ಪುರುಷರಿಗಿಂತ ಮಹಿಳೆಯರೇ ಹಕ್ಕು ಚಲಾವಣೆಯಲ್ಲಿ ಮುಂದೆ ಇರುವುದು ಚುನಾವಣಾ ಆಯೋಗದ ದತ್ತಾಂಶದಿಂದ ತಿಳಿದುಬರುತ್ತದೆ.
ಈ ಬಾರಿ ಮಾತ್ರ, ಪುರುಷ ಮತ್ತು ಮಹಿಳಾ ಮತದಾರರಿಂದ ಚಲಾವಣೆಯಾದ ಮತಗಳ ನಡುವಿನ ಅಂತರ ದಾಖಲೆ ಪ್ರಮಾಣದಲ್ಲಿದೆ. ಶೇ 71.6ರಷ್ಟು ಮಹಿಳೆಯರು ಮತ ಚಲಾಯಿಸಿದ್ದರೆ, ಪುರುಷರ ಪ್ರಮಾಣ ಶೇ 66.91. ಅಂದರೆ, ಪುರುಷರಿಗಿಂತ ಮಹಿಳೆಯರ ಮತಪ್ರಮಾಣವು ಶೇ 8.8ರಷ್ಟು ಹೆಚ್ಚು ಇರುವುದು ದತ್ತಾಂಶದಿಂದ ತಿಳಿದುಬರುತ್ತದೆ.
ಮದ್ಯ ಮಾರಾಟ ನಿಷೇಧ
ಮಹಿಳೆಯರ ಮೀಸಲಾತಿಯಲ್ಲಿ ಹೆಚ್ಚಳ ವಿದ್ಯಾರ್ಥಿನಿಯರಿಗೆ ಸೈಕಲ್ ವಿತರಣೆಯಂತಹ ಕ್ರಮಗಳು ಮಹಿಳೆಯರು ನಿತೀಶ್ ಕುಮಾರ್ ಪರ ನಿಲ್ಲಲು ಕಾರಣವಾದವು. ಮದ್ಯ ನಿಷೇಧದ ನಂತರ ಕೌಟುಂಬಿಕ ದೌರ್ಜನ್ಯ ಗಣನೀಯವಾಗಿ ತಗ್ಗಿದೆ ಎಂದು ಮಹಿಳೆಯರೇ ಹೇಳುತ್ತಿದ್ದಾರೆ –ರಾಧಿಕಾ ರಾಮಶೇಷನ್ ಪತ್ರಕರ್ತೆ ಹಾಗೂ ರಾಜಕೀಯ ವಿಶ್ಲೇಷಕಿ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ ಜಾರಿಗೊಳಿಸಿದ ಯೋಜನೆಗಳು ಎನ್‌ಡಿಎ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿವೆ. ವಿವಿಧ ಆಮಿಷಗಳನ್ನು ಒಡ್ಡಿ ಮಹಿಳಾ ಮತದಾರರ ಮನ ಗೆಲ್ಲಲು ಮಹಾಘಟಬಂಧನ ಪ್ರಯತ್ನಿಸಿತು. ಆದರೆ ಅದರ ಆಶ್ವಾಸನೆಗಳನ್ನು ಮಹಿಳೆಯರು ನಂಬಲೇ ಇಲ್ಲ –ನಿಖಿಲ್ ಆನಂದ ಬಿಜೆಪಿ ಒಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಚುನಾವಣೆ ಸಂದರ್ಭದಲ್ಲಿ ಘೋಷಿಸುವ ಮಹಿಳಾ ಕೇಂದ್ರಿತ ಕಾರ್ಯಕ್ರಮಗಳು ಆಡಳಿತಾರೂಢ ಪಕ್ಷ ಅಥವಾ ಮೈತ್ರಿಕೂಟಕ್ಕೆ ನ್ಯಾಯಸಮ್ಮತವಲ್ಲದ ಅನುಕೂಲ ಒದಗಿಸುತ್ತವೆ. ಇಂತ ನಡೆ ಮುಕ್ತ ಹಾಗೂ ನ್ಯಾಯಯುತ ಚುನಾವಣೆಗೆ ವಿರುದ್ಧವಾದುದು ರಶೀದ್ ಕಿದ್ವಾಯಿ ರಾಜಕೀಯ ವಿಶ್ಲೇಷಕ ಹಾಗೂ ಲೇಖಕ
ಪ್ರಮುಖ ಅಂಶಗಳು
* ಪ್ರಧಾನಿ ನರೇಂದ್ರ ಮೋದಿ ಅವರು ‘ಮುಖ್ಯಮಂತ್ರಿ ಮಹಿಳಾ ರೋಜಗಾರ ಯೋಜನೆ’ಯಡಿ ಸ್ವ ಉದ್ಯೋಗ ಕೈಗೊಳ್ಳುವುದಕ್ಕೆ ಪ್ರತಿ ಅರ್ಹ ಮಹಿಳೆಗೆ ₹10 ಸಾವಿರ ನೀಡುವುದಾಗಿ ಘೋಷಿಸಿದರು. ಯೋಜನೆಯಡಿ 75 ಲಕ್ಷ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ಸೆಪ್ಟೆಂಬರ್‌ನಲ್ಲಿ ಈ ಹಣವನ್ನು ವರ್ಗಾವಣೆ ಮಾಡಲಾಯಿತು. ಇದು ಮಹಿಳೆಯರ ಮತಪ್ರಮಾಣ ಹೆಚ್ಚಾಗಲು ಪ್ರಮುಖ ಕಾರಣಗಳಲ್ಲೊಂದು. * ಏಳು ಜಿಲ್ಲೆಗಳಲ್ಲಿ ಪುರುಷರಿಗಿಂತ ಮಹಿಳೆಯರ ಮತಪ್ರಮಾಣ ಶೇ14ಕ್ಕಿಂತ ಹೆಚ್ಚು ಇದೆ. 10 ಜಿಲ್ಲೆಗಳಲ್ಲಿ ಈ ಅಂತರವು ಶೇ10ಕ್ಕೂ ಅಧಿಕ * ಪಟ್ನಾ ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಮಹಿಳೆಯರಿಗಿಂತ ಪುರುಷರೇ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದಾರೆ * 2005ರಲ್ಲಿ ನಿತೀಶ್ ಕುಮಾರ್ ಗೆದ್ದು ಮೊದಲ ಬಾರಿಗೆ ಮುಖ್ಯಮಂತ್ರಿಯಾದರು. ಈ ಚುನಾವಣೆಯನ್ನು ಹೊರತುಪಡಿಸಿ ಉಳಿದೆಲ್ಲಾ ಚುನಾವಣೆಗಳಲ್ಲಿ ಮಹಿಳೆಯರೇ ಹೆಚ್ಚು ಪ್ರಮಾಣದಲ್ಲಿ ಮತ ಚಲಾಯಿಸಿದ್ದಾರೆ * ನಿತೀಶ್ ಕುಮಾರ್ ಮದ್ಯ ಮಾರಾಟ ನಿಷೇಧಿಸಿದರು. ಜೀವಿಕಾ ದೀದಿ ಯೋಜನಾ ಜಾರಿಗೊಳಿಸಿದರು. ಇಂತಹ ಅನೇಕ ಕಾರ್ಯಕ್ರಮಗಳು ಮಹಿಳೆಯರ ಬೆಂಬಲ ಗಿಟ್ಟಿಸುವಲ್ಲಿ ಯಶಸ್ಸು ತಂದುಕೊಟ್ಟಿವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.