‘ಆಪರೇಷನ್ ಬ್ಲೂ ಸ್ಟಾರ್’ನ 41ನೇ ವರ್ಷಾಚರಣೆ ಅಂಗವಾಗಿ ಅಮೃತಸರದಲ್ಲಿ ಶುಕ್ರವಾರ ಶಾಂತಿಯುತ ಬಂದ್ ನಡೆದಿದ್ದು, ಪೊಲೀಸರು ಮೇಲ್ವಿಚಾರಣೆ ನಡೆಸಿದರು
–ಪಿಟಿಐ ಚಿತ್ರ
ಅಮೃತಸರ: ‘ಆಪರೇಷನ್ ಬ್ಲೂಸ್ಟಾರ್’ನ 41ನೇ ವರ್ಷಾಚರಣೆ ಅಂಗವಾಗಿ ಅಮೃತಸರದ ಸ್ವರ್ಣ ಮಂದಿರ ಹಾಗೂ ಪಟ್ಟಣದಲ್ಲಿ ಶುಕ್ರವಾರ ಶಾಂತಿಯುತವಾಗಿ ಬಂದ್ ಆಚರಿಸಲಾಯಿತು. ಈ ವೇಳೆ ಸಿಖ್‌ರ ಉನ್ನತಾಧಿಕಾರ ಕೇಂದ್ರಗಳಲ್ಲಿ ಒಂದಾದ ‘ಅಕಾಲ್ ತಖ್ತ್’ನ ಸಂಘಟನೆಯ ಕಾರ್ಯಕರ್ತರು ಖಾಲಿಸ್ತಾನಿಗಳ ಪರವಾಗಿ ಘೋಷಣೆ ಕೂಗಿದರು.
40 ವರ್ಷಗಳಿಂದ ಬ್ಲೂಸ್ಟಾರ್ ವರ್ಷಾಚರಣೆಯಲ್ಲಿ ಅಕಾಲ್ ತಖ್ತ್‌ನ ಜಾತೇದಾರ್ ಗ್ಯಾನಿ ಕುಲ್‌ದೀಪ್ ಸಿಂಗ್ ಅವರು ಸಮುದಾಯವನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದರು. ಈ ಸಲ ಹಳೆಯ ಸಂಪ್ರದಾಯ ಮುರಿದು, ಅಕಾಲ್ ತಖ್ತ್‌ನಿಂದ ಏರ್ಪಡಿಸಿದ್ದ ಸಿಖ್ಖರ ಸಾಮೂಹಿಕ ಪ್ರಾರ್ಥನೆ ನೆರವೇರಿಸುವ ಮೂಲಕ ವಿವಾದದಿಂದ ದೂರ ಉಳಿದರು.
‘ಸ್ವರ್ಣ ಮಂದಿರವು ಸಿಖ್ ಹಾಗೂ ಅಕಾಲ್ ತಖ್ತ್‌ಗೆ ಆಧ್ಯಾತ್ಮಿಕ ಮತ್ತು ಧಾರ್ಮಿಕ ಸ್ಥಳವಾಗಿದೆ. ಎಲ್ಲರೂ ಶಾಂತಿ ಬಯಸುವುದರಿಂದ ಇದು ಎಂದಿಗೂ ಪ್ರಕ್ಷುಬ್ಧ ಸ್ಥಳವಾಗಬಾರದು’ ಎಂದು ಪ್ರಾರ್ಥನೆಯ ಕೊನೆಯಲ್ಲಿ ತಿಳಿಸಿದರು.
ಮೂಲಭೂತವಾದಿ ಸಿಖ್ ಸಂಘಟನೆ ‘ದಲ್ ಖಾಲ್ಸಾ’ದ ಕಾರ್ಯಕರ್ತರು ಖಾಲಿಸ್ತಾನಿಗಳ ಧ್ವಜ ಹಾಗೂ ಹತ್ಯೆಯಾದ ಬಂಡುಕೋರ ನಾಯಕ ಜರ್ನೈಲ್ ಸಿಂಗ್ ಬಿಂಧ್ರನ್‌ವಾಲೆ ಅವರ ಭಾವಚಿತ್ರ ಹಿಡಿದುಕೊಂಡು ಸಾಗಿದರು.
‘ಆಪರೇಷನ್ ಬ್ಲೂ ಸ್ಟಾರ್’ನ 41ನೇ ವರ್ಷಾಚರಣೆ ಅಂಗವಾಗಿ ಅಮೃತಸರದ ಸ್ವರ್ಣ ದೇವಾಲಯದಲ್ಲಿ ವಿವಿಧ ಸಿಖ್ ಸಂಘಟನೆಗಳು ಒಟ್ಟಿಗೆ ಸೇರಿ ಪ್ರಾರ್ಥನೆ ಸಲ್ಲಿಸಿದರು
ಸ್ವರ್ಣ ಮಂದಿರದ ಒಳ ಆವರಣವು ಸಂಪೂರ್ಣವಾಗಿ ‘ಖಾಲಿಸ್ತಾನಿ’ ಪರ ಘೋಷಣೆಗೆ ಸಾಕ್ಷಿಯಾಯಿತು. ‘ದಲ್ ಖಾಲ್ಸಾ’ದ ಕಾರ್ಯಕರ್ತರು, ಮಾಜಿ ಸಂಸದ ಸಿಮರ್‌ಜಿಂತ್ ಸಿಂಗ್ ಬೆಂಬಲಿತ ಶಿರೋಮಣಿ ಅಕಾಲಿ ದಳದ ಕಾರ್ಯಕರ್ತರು, ಮಾಜಿ ಸಂಸದ ಧಿಯಾನ್ ಸಿಂಗ್ ಮಂದ್ ಅವರ ಅಕಾಲ್ ತಖ್ತ್‌ನ ಕಾರ್ಯಕರ್ತರು ಕೂಡ ಖಾಲಿಸ್ತಾನ ಪರ ಘೋಷಣೆ ಕೂಗಿದರು.
1984ರಲ್ಲಿ ಅಮೃತಸರದ ಸ್ವರ್ಣ ಮಂದಿರದಲ್ಲಿ ಅಡಗಿದ್ದ ಬಂಡುಕೋರರನ್ನು ಸದೆಬಡಿಯಲು ‘ಆಪರೇಷನ್ ಬ್ಲೂ–ಸ್ಟಾರ್’ ಹೆಸರಿನಲ್ಲಿ ಸೇನಾ ಕಾರ್ಯಾಚರಣೆ ನಡೆಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.