ADVERTISEMENT

ಉತ್ತರ ಪ್ರದೇಶ: 17 ನವಜಾತ ಹೆಣ್ಣುಮಕ್ಕಳಿಗೆ ‘ಸಿಂಧೂರ್’ ಎಂದು ನಾಮಕರಣ

​ಪ್ರಜಾವಾಣಿ ವಾರ್ತೆ
Published 12 ಮೇ 2025, 10:51 IST
Last Updated 12 ಮೇ 2025, 10:51 IST
   

ಕುಶಿನಗರ(ಉತ್ತರ ಪ್ರದೇಶ): ಕಳೆದ ತಿಂಗಳು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಸೇಡು ತೀರಿಸಿಕೊಳ್ಳಲು ಪಾಕಿಸ್ತಾನದ ವಿರುದ್ಧ ಭಾರತ ನಡೆಸಿದ ಮಿಲಿಟರಿ ಕಾರ್ಯಾಚರಣೆಯಾದ‘ಆಪರೇಷನ್ ಸಿಂಧೂರ’ದಿಂದ ಪ್ರೇರಿತರಾಗಿ, ಇಲ್ಲಿನ 17 ನವಜಾತ ಹೆಣ್ಣುಮಕ್ಕಳಿಗೆ ಅವರ ಕುಟುಂಬಗಳು ‘ಸಿಂಧೂರ್’ ಎಂದು ಹೆಸರಿಟ್ಟಿವೆ.

ಮೇ10 ಮತ್ತು 11ರಂದು ಕುಶಿನಗರ ವೈದ್ಯಕೀಯ ಕಾಲೇಜಿನಲ್ಲಿ ಜನಿಸಿದ 17 ಹೆಣ್ಣುಮಕ್ಕಳಿಗೆ ಅವರ ಕುಟುಂಬ ಸದಸ್ಯರು ‘ಸಿಂಧೂರ್’ ಎಂದು ಹೆಸರಿಟ್ಟಿದ್ದಾರೆ ಎಂದು ಪ್ರಾಂಶುಪಾಲ ಡಾ.ಆರ್.ಕೆ. ಶಾಹಿ ಸೋಮವಾರ ಪಿಟಿಐಗೆ ತಿಳಿಸಿದ್ದಾರೆ.

ಏಪ್ರಿಲ್ 22ರಂದು ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಜನಪ್ರಿಯ ಪ್ರವಾಸಿ ಪಟ್ಟಣ ಪಹಲ್ಗಾಮ್ ಬಳಿಯ ಬೈಸರನ್‌ನಲ್ಲಿ ಭಯೋತ್ಪಾದಕರು ಗುಂಡು ಹಾರಿಸಿ ಇಪ್ಪತ್ತಾರು ಜನರನ್ನು ಕೊಂದಿದ್ದರು. ಈ ಪೈಕಿ ಬಹುತೇಕರು ಪ್ರವಾಸಿಗರು.

ADVERTISEMENT

ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ-ಕಾಶ್ಮೀರದಲ್ಲಿ ಭಾರತೀಯ ಸೇನೆಯು ಮೇ 7ರಂದು ಆಪರೇಷನ್ ಸಿಂಧೂರ ಆರಂಭಿಸಿತ್ತು. ಇದರಲ್ಲಿ, ಭಯೋತ್ಪಾದಕರ 9 ನೆಲೆಗಳನ್ನು ನಾಶಪಡಿಸಲಾಗಿದೆ.

ಪಾಕಿಸ್ತಾನಕ್ಕೆ ಸೂಕ್ತ ಪ್ರತ್ಯುತ್ತರ ನೀಡಿದ್ದಕ್ಕಾಗಿ ಭಾರತೀಯ ಸಶಸ್ತ್ರ ಪಡೆಗಳನ್ನು ಶ್ಲಾಘಿಸಿರುವ ಹೆಣ್ಣು ಮಗುವಿಗೆ ಜನ್ಮ ನೀಡಿದ ಕುಶಿನಗರ ನಿವಾಸಿ ಅರ್ಚನಾ ಶಾಹಿ, ತಮ್ಮ ಮಗಳಿಗೆ ಮಿಲಿಟರಿ ಕಾರ್ಯಾಚರಣೆಯ ಹೆಸರನ್ನೇ ಇಟ್ಟಿರುವುದಾಗಿ ಹೇಳಿದ್ದಾರೆ.

‘ಪಹಲ್ಗಾಮ್ ದಾಳಿಯಲ್ಲಿ ಹಲವು ಮಹಿಳೆಯರು ತಮ್ಮ ಗಂಡಂದಿರನ್ನು ಕಳೆದುಕೊಂಡು ದಿಕ್ಕುತೋಚದಂತಾಗಿದ್ದಾರೆ. ಅದಕ್ಕೆ ಪ್ರತಿಕ್ರಿಯೆಯಾಗಿ ಭಾರತೀಯ ಸೇನೆಯು ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ನಡೆಸಿದೆ. ಇದರ ಬಗ್ಗೆ ನಮಗೆ ಹೆಮ್ಮೆ ಇದೆ. ಈಗ, ‘ಸಿಂಧೂರ’ಒಂದು ಪದವಲ್ಲ. ಅದೊಂದು ಭಾವನೆ. ಆದ್ದರಿಂದ, ನಾವು ನಮ್ಮ ಮಗಳಿಗೆ ‘ಸಿಂಧೂರ’ಎಂದು ಹೆಸರಿಡಲು ನಿರ್ಧರಿಸಿದೆವು’ಎಂದು ಅರ್ಚನಾ ಹೇಳಿದ್ದಾರೆ.

ಅವರ ಪತಿ ಅಜಿತ್ ಶಾಹಿ ಕೂಡ ಇದೇ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಅರ್ಚನಾ ಮತ್ತು ನಾನು ನಮ್ಮ ಮಗಳು ಹುಟ್ಟುವ ಮೊದಲೇ ಆ ಹೆಸರಿನ ಬಗ್ಗೆ ಯೋಚಿಸಿದ್ದೆವು. ಈ ಪದ ನಮಗೆ ಸ್ಫೂರ್ತಿ ಎಂದು ಅವರು ಹೇಳಿದ್ದಾರೆ.

ಪಹಲ್ಗಾಮ್‌ನಲ್ಲಿ 26 ಅಮಾಯಕರ ಹತ್ಯೆಗೆ ಭಾರತ ಪ್ರತೀಕಾರ ತೀರಿಸಿಕೊಂಡಾಗಿನಿಂದ ನಮ್ಮ ಸೊಸೆ ಕಾಜಲ್ ಗುಪ್ತಾ ತನ್ನ ನವಜಾತ ಶಿಶುವಿಗೆ ಸಿಂಧೂರ್ ಎಂದು ಹೆಸರಿಡಲು ಬಯಸಿದ್ದರು ಎಂದು ಪದ್ರೌನಾದ ಮದನ್ ಗುಪ್ತಾ ಹೇಳಿದ್ದಾರೆ.

ಈ ರೀತಿಯಲ್ಲಿ,ನಾವು ಕಾರ್ಯಾಚರಣೆಯನ್ನು ನೆನಪಿಸಿಕೊಳ್ಳುವುದು ಮಾತ್ರವಲ್ಲದೆ, ಈ ದಿನವನ್ನು ಸಂಭ್ರಮಿಸುತ್ತೇವೆ ಎಂದು ಗುಪ್ತಾ ಪಿಟಿಐಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.