
ಲೇಹ್: ‘ಪಹಲ್ಗಾಮ್ ಭಯೋತ್ಪಾದಕ ಕೃತ್ಯದ ನಂತರ ಆಪರೇಷನ್ ಸಿಂಧೂರ ಕಾರ್ಯಾಚರಣೆ ವೇಳೆ ನಾವು ಬಯಸಿದ್ದರೆ ಇನ್ನೂ ಹೆಚ್ಚಿನದನ್ನು ಮಾಡಬಹುದಿತ್ತು. ಆದರೆ, ನಮ್ಮ ಪಡೆಗಳು ಶೌರ್ಯ ಮಾತ್ರವಲ್ಲದೆ ಸಂಯಮವನ್ನೂ ಪ್ರದರ್ಶಿಸಿದವು. ಅಗತ್ಯವಿರುವ ಕಾರ್ಯಾಚರಣೆ ಮಾತ್ರ ಕೈಗೊಳ್ಳಲಾಗಿತ್ತು’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಭಾನುವಾರ ಹೇಳಿದರು.
ಗಡಿ ರಸ್ತೆಗಳ ಸಂಸ್ಥೆಯು (ಬಿಆರ್‌ಒ) ದೇಶದ ವಿವಿಧ ಭಾಗಗಳಲ್ಲಿ ಕೈಗೊಂಡಿದ್ದ 125 ಮೂಲಸೌಕರ್ಯ ಯೋಜನೆಗಳನ್ನು ಉದ್ಘಾಟಿಸಿದ ನಂತರ ಮಾತನಾಡಿದರು.
‘ಈ ಕಾರ್ಯಾಚರಣೆಯು ಭಯೋತ್ಪಾದಕರ ದಾಳಿಗಳನ್ನು ತಟಸ್ಥಗೊಳಿಸುವ ಮೂಲಕ ನಮ್ಮ ಸೇನಾ ಪಡೆಗಳ ಸಾಮರ್ಥ್ಯ ಮತ್ತು ಶಿಸ್ತು ಎರಡನ್ನೂ ಒತ್ತಿ ಹೇಳಿತ್ತು’ ಎಂದು ತಿಳಿಸಿದರು.
‘ಸಶಸ್ತ್ರ ಪಡೆಗಳು ಹಾಗೂ ಲಡಾಖ್‌ನ ಸ್ಥಳೀಯ ಆಡಳಿತ ಮತ್ತು ಗಡಿ ಪ್ರದೇಶದ ಜನರ ನಡುವಿನ ಸಮನ್ವಯ ಅದ್ಭುತವಾಗಿತ್ತು. ಈ ಸಮನ್ವಯವೇ ನಮ್ಮ ಗುರುತನ್ನು ವ್ಯಾಖ್ಯಾನಿಸುತ್ತದೆ. ಪರಸ್ಪರ ಬಂಧವೇ ನಮಗೆ ವಿಶಿಷ್ಟ ಗುರುತನ್ನು ನೀಡುತ್ತದೆ’ ಎಂದರು.
‘ಬಲವಾದ ಸಂಪರ್ಕ ಜಾಲದಿಂದಾಗಿ ಇಂತಹ ಬೃಹತ್ ಕಾರ್ಯಾಚರಣೆ ಕೈಗೊಳ್ಳಲು ಸಾಧ್ಯವಾಯಿತು. ಸಶಸ್ತ್ರ ಪಡೆಗಳು ಸರಿಯಾದ ಸಮಯಕ್ಕೆ ಅಗತ್ಯ ಉಪಕರಣಗಳನ್ನು ತಲುಪಿಸಲು ಸಾಧ್ಯವಾಯಿತು. ಗಡಿ ಪ್ರದೇಶದೊಳಗಿನ ಸಂಪರ್ಕವನ್ನೂ ಕಾಯ್ದುಕೊಳ್ಳಲಾಗಿತ್ತು. ಇದು ಆಪರೇಷನ್ ಸಿಂಧೂರಕ್ಕೆ ಐತಿಹಾಸಿಕ ಯಶಸ್ಸನ್ನು ನೀಡಿತು’ ಎಂದು ಒತ್ತಿ ಹೇಳಿದರು.
ಭದ್ರತೆಯ ಬೆನ್ನೆಲುಬು: ‘ಸಮರ್ಪಕ ರಸ್ತೆಗಳು, ಅತ್ಯಾಧುನಿಕ ಸಂವಹನ ವ್ಯವಸ್ಥೆ, ಉಪಗ್ರಹ ನೆರವು, ಕಣ್ಗಾವಲು ಜಾಲಗಳು ಮತ್ತು ಶಸ್ತ್ರಾಸ್ತ್ರಗಳ ಸಾಗಣೆ, ವಿತರಣೆಯಿಂದಾಗಿ ಕಷ್ಟಕರವಾದ ಭೂಪ್ರದೇಶಗಳಲ್ಲಿಯೂ ಸೈನಿಕರು ದೃಢವಾಗಿ ಕಾರ್ಯ ನಿರ್ವಹಿಸುವಂತಾಗಿದೆ. ಗಡಿಯಲ್ಲಿ ನಿಯೋಜಿಸಲಾದ ಸೈನಿಕನ ಪ್ರತಿ ನಿಮಿಷ, ಪ್ರತಿ ಸೆಕೆಂಡ್ ಅಮೂಲ್ಯವಾದದ್ದು. ಆದ್ದರಿಂದ, ಸಂಪರ್ಕವನ್ನು ಕೇವಲ ನೆಟ್‌ವರ್ಕ್‌ಗಳು, ಆಪ್ಟಿಕಲ್ ಫೈಬರ್, ಡ್ರೋನ್‌ಗಳು ಮತ್ತು ರಾಡಾರ್‌ಗಳಿಗೆ ಸೀಮಿತವಾಗಿ ನೋಡಬಾರದು. ಬದಲಿಗೆ ಭದ್ರತೆಯ ಬೆನ್ನೆಲುಬಾಗಿ ನೋಡಬೇಕು’ ಎಂದು ರಾಜನಾಥ ಸಿಂಗ್ ಹೇಳಿದರು.
‘ರಕ್ಷಣಾ ಸಾಮಗ್ರಿ ಉತ್ಪಾದನೆ ₹1.51 ಲಕ್ಷ ಕೋಟಿಗೆ ಏರಿಕೆ’
‘ಭಾರತದ ರಕ್ಷಣಾ ಸಾಮಗ್ರಿಗಳ ಉತ್ಪಾದನೆಯು 2014ರಲ್ಲಿ ₹46 ಸಾವಿರ ಕೋಟಿ ಇದ್ದದ್ದು ಈಗ ₹1.51 ಲಕ್ಷ ಕೋಟಿಗೆ ಏರಿಕೆಯಾಗಿದೆ. ಆಮದು ಅವಲಂಬಿತ ದೇಶವು ಉತ್ಪಾದಕ–ರಫ್ತುದಾರನಾಗಿ ಹೊರಹೊಮ್ಮಿದೆ’ ಎಂದು ರಾಜನಾಥ ಸಿಂಗ್ ಹೇಳಿದರು. ‘ಒಂದು ಕಾಲದಲ್ಲಿ ಭಾರತವು ದೇಶೀಯವಾಗಿ ಶಸ್ತ್ರಾಸ್ತ್ರ ಮತ್ತು ಉಪಕರಣಗಳನ್ನು ತಯಾರಿಸಲು ಬಲಿಷ್ಠವಾದ ವ್ಯವಸ್ಥೆಯ ಕೊರತೆಯನ್ನು ಹೊಂದಿತ್ತು. ಆದರೆ ಕಳೆದ ದಶಕದಲ್ಲಿ ನಿರಂತರ ಪ್ರಯತ್ನಗಳಿಂದಾಗಿ ₹1 ಸಾವಿರ ಕೋಟಿಗಿಂತ ಕಡಿಮೆಯಿದ್ದ ರಕ್ಷಣಾ ಸಾಮಗ್ರಿಗಳ ರಫ್ತು ಈಗ ಸುಮಾರು ₹24 ಸಾವಿರ ಕೋಟಿಗೆ ತಲುಪಿದೆ’ ಎಂದು ತಿಳಿಸಿದರು. ‘ಲಡಾಖ್ ಜಮ್ಮು ಮತ್ತು ಕಾಶ್ಮೀರ ಅರುಣಾಚಲ ಪ್ರದೇಶ ಸಿಕ್ಕಿಂ ಹಿಮಾಚಲ ಪ್ರದೇಶ ಉತ್ತರಾಖಂಡ ರಾಜಸ್ಥಾನ ಪಶ್ಚಿಮ ಬಂಗಾಳ ಮತ್ತು ಮಿಜೋರಾಂನಲ್ಲಿ ₹5 ಸಾವಿರ ಕೋಟಿ ವೆಚ್ಚದಲ್ಲಿ 28 ರಸ್ತೆಗಳು 93 ಸೇತುವೆಗಳು ಮತ್ತು ನಾಲ್ಕು ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.