ಪುಣೆ: ಭಾರತದ ಸಶಸ್ತ್ರ ಪಡೆಗಳು ಹಾಗೂ ನಾಯಕತ್ವವು ‘ಸ್ವರಾಜ್ಯ’ ಅಥವಾ ದೇಶದ ಸಾರ್ವಭೌಮತ್ವವನ್ನು ರಕ್ಷಿಸಲು ಬದ್ಧವಾಗಿದೆ. ‘ಸಿಂಧೂರ’ ಕಾರ್ಯಾಚರಣೆ ಇದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದರು.
ಇಲ್ಲಿನ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಆವರಣದಲ್ಲಿ (ಎನ್‌ಡಿಎ) ಮರಾಠ ಮುತ್ಸದ್ಧಿ, ಪೇಶ್ವೆ ಬಾಜಿರಾವ್–1 ಅವರ ಪ್ರತಿಮೆಯನ್ನು ಅನಾವರಣಗೊಳಿಸಿದ ಬಳಿಕ ಅವರು ಮಾತನಾಡಿದರು.
‘ನನಗೆ ನಕಾರಾತ್ಮಕ ಯೋಚನೆಗಳು ಬಂದಾಗೆಲ್ಲ ಛತ್ರಪತಿ ಶಿವಾಜಿ ಮಹಾರಾಜರು ಹಾಗೂ ಬಾಜಿರಾವ್ ಅವರನ್ನು ನೆನೆಯುತ್ತೇನೆ. ಎಷ್ಟೆಲ್ಲ ಪ್ರತಿಕೂಲ ಪರಿಸ್ಥಿತಿಗಳ ನಡುವೆಯೂ ಅವರು ಸ್ವರಾಜ್ಯ ಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದರು. ಇದೀಗ ಸ್ವರಾಜ್ಯವನ್ನು ರಕ್ಷಿಸಿಕೊಳ್ಳುವ ಜವಾಬ್ದಾರಿ ದೇಶದ 140 ಕೋಟಿ ಜನರ ಮೇಲಿದೆ’ ಎಂದರು.
ಎನ್‌ಡಿಎಯು ಸೇನಾ ನಾಯಕತ್ವದ ತರಬೇತಿ ಪಡೆಯುವ ಸ್ಥಳವಾಗಿದೆ. ಹೀಗಾಗಿ ಬಾಜಿರಾವ್ ಅವರ ಪ್ರತಿಮೆಗೆ ಇದು ಸೂಕ್ತ ಸ್ಥಳವಾಗಿದೆ. ಸ್ವರಾಜ್ಯ ಸ್ಥಾಪನೆಗಾಗಿ ನಾವು ಹೋರಾಟ ಮಾಡಿದ್ದೇವೆ. ಇದೀಗ ಅದನ್ನು ರಕ್ಷಿಸಿಕೊಳ್ಳಲು ಹೋರಾಡುವ ಸಮಯ ಬಂದಾಗ ನಮ್ಮ ಪಡೆಗಳು ಅದರಲ್ಲಿ ಯಶಸ್ವಿಯಾಗುತ್ತವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.