ADVERTISEMENT

ಪರಿಸರ ಕಾಳಜಿ: ಶಬರಿಮಲೆ ವಿಮಾನ ನಿಲ್ದಾಣಕ್ಕೆ ಆಕ್ಷೇಪ

ಕೇರಳ: ಹೈಸ್ಪೀಡ್‌ ರೈಲು ಮಾರ್ಗಕ್ಕೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 21:15 IST
Last Updated 27 ಅಕ್ಟೋಬರ್ 2021, 21:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ತಿರುವನಂತ‍ಪುರ: ಪದೇ ಪದೇ ಸಂಭವಿಸಿದ ನೈಸರ್ಗಿಕ ವಿಕೋಪಗಳು ಪರಿಸರದ ಬಗ್ಗೆ ಕೇರಳದ ಜನರು ಕಾಳಜಿ ವಹಿಸುವಂತೆ ಮಾಡಿವೆ. ಹೈಸ್ಪೀಡ್‌ ರೈಲು ಮಾರ್ಗ ಯೋಜನೆ, ಶಬರಿಮಲೆ ವಿಮಾನ ನಿಲ್ದಾಣ ಯೋಜನೆಗಳಿಗೆ ಜನರ ವಿರೋಧ ಹೆಚ್ಚಾಗಲು ಇತ್ತೀಚಿನ ವರ್ಷಗಳ ಭಾರಿ ಮಳೆ ಮತ್ತು ಪ್ರವಾಹಗಳೂ ಕಾರಣ ಎನ್ನಲಾಗಿದೆ.

ಈ ಯೋಜನೆಗಳು ಕಾರ್ಯಸಾಧುವೇ? ಜತೆಗೆ, ತೀವ್ರ ಒತ್ತಡಕ್ಕೆ ಒಳಗಾಗಿರುವ ಬೊಕ್ಕಸಕ್ಕೆ ಭಾರಿ ಮೊತ್ತದ ಈ ಯೋಜನೆಗಳು ಇನ್ನಷ್ಟು ಹೊರೆ ಅಲ್ಲವೇ ಎಂಬ ಪ್ರಶ್ನೆಗಳನ್ನೂ ಜನರು ಕೇಳುತ್ತಿದ್ದಾರೆ.

ವಿಧಾನಸಭೆ ಕಾರ್ಯಾಲಯದ ಮುಂದೆ ಬುಧವಾರ ಸೇರಿದ್ದ ನೂರಾರು ಜನರು ಹೈಸ್ಪೀಡ್‌ ರೈಲು ಮಾರ್ಗ ಯೋಜನೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಪರಿಸರ ಕಾರ್ಯಕರ್ತರು, ಧಾರ್ಮಿಕ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದರು.

ADVERTISEMENT

ರಾಜಧಾನಿ ತಿರುವನಂತಪುರದಿಂದ ದಕ್ಷಿಣದ ಕಾಸರಗೋಡಿಗೆ ಹೈಸ್ಪೀಡ್‌ ರೈಲು ಸಂಪರ್ಕಕ್ಕೆ 530 ಕಿ.ಮೀ. ಉದ್ದದ ರೈಲು ಮಾರ್ಗ ನಿರ್ಮಿಸಬೇಕಿದೆ. ಸಂಚಾರ ದಟ್ಟಣೆಯ ರೈಲು ಮತ್ತು ರಸ್ತೆ ಸಂಪರ್ಕಕ್ಕೆ ಇದೊಂದು ಪರಿಸರಸ್ನೇಹಿ ಪರ್ಯಾಯ ಎಂದೂ ಹೇಳಲಾಗುತ್ತಿದೆ. ಈ ಮಾರ್ಗ ನಿರ್ಮಾಣವಾದರೆ, ತಿರುವನಂತಪುರ–ಕಾಸರಗೋಡು ನಡುವಣ ಪ್ರಯಾಣ ಸಮಯವು ಹತ್ತು ತಾಸಿನಿಂದ ನಾಲ್ಕು ತಾಸಿಗೆ ಇಳಿಯಲಿದೆ.

ಪ್ರಸ್ತಾವಿತ ರೈಲು ಮಾರ್ಗದ ಎರಡೂ ಕಡೆ ರಕ್ಷಣಾ ಗೋಡೆಯು ಯೋಜನೆಯ ಭಾಗವಾಗಿದೆ. ಇದು ರಾಜ್ಯವನ್ನು ಅಕ್ಷರಶಃ ಎರಡು ಭಾಗವಾಗಿ ವಿಭಜಿಸಲಿದೆ. ಜತೆಗೆ, ನೀರಿನ ಸಹಜ ಹರಿವಿಗೆ ತೊಡಕಾಗಲಿದೆ ಎಂದು ಪರಿಸರವಾದಿಗಳು ಹೇಳಿದ್ದಾರೆ.

ಶಬರಿಮಲೆ ವಿಮಾನ ನಿಲ್ದಾಣಕ್ಕೆ ಆಕ್ಷೇಪ

ಶಬರಿಮಲೆ ವಿಮಾನ ನಿಲ್ದಾಣ ಯೋಜನೆಯ ವಿರುದ್ಧದ ಹೋರಾಟವೂ ಬಲವಾಗುತ್ತಿದೆ. ಕೋಟಯಂಜಿಲ್ಲೆಯಲ್ಲಿ ಈಚೆಗೆ ಭಾರಿ ಪ್ರವಾಹ ಮತ್ತು ಭೂಕುಸಿತಕ್ಕೆ ಸಿಲುಕಿದ್ದ ಕೂಟ್ಟಿಕ್ಕಲ್ ಮತ್ತು ಮುಂಡಕ್ಕಯಂ ಪ್ರದೇಶಗಳಿಗೆ, ವಿಮಾನ ನಿಲ್ದಾಣ ಯೋಜನೆಗೆ ಆಯ್ಕೆ ಮಾಡಿಕೊಂಡಿರುವ ಚೆರುವ್ಯಾಲಿ ಎಸ್ಟೇಟ್ ಪ್ರದೇಶವು ಸನಿಹವೇ ಇದೆ. ಹೀಗಾಗಿ ಈ ಯೋಜನೆ ವಿರುದ್ಧ ಹೋರಾಟ ತೀವ್ರತೆ ಪಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.