ADVERTISEMENT

‘ಕೈ’ ತಪ್ಪಲಿದೆಯೇ ವಿಪಕ್ಷ ನಾಯಕನ ಸ್ಥಾನ?

ಆನಂದ್ ಮಿಶ್ರಾ
Published 25 ಮೇ 2019, 16:15 IST
Last Updated 25 ಮೇ 2019, 16:15 IST
   

ನವದೆಹಲಿ:17ನೇ ಲೋಕಸಭೆಯಲ್ಲಿ ಕೇವಲ 52 ಸ್ಥಾನಗಳನ್ನು ಹೊಂದಿರುವಕಾಂಗ್ರೆಸ್‌ಗೆ ವಿರೋಧ ಪಕ್ಷದ ನಾಯಕನ ಸ್ಥಾನ ಸಿಗುತ್ತದೆಯೇ ಎಂಬ ಚರ್ಚೆ ಈಗ ಮತ್ತೆ ಚಾಲ್ತಿಗೆ ಬಂದಿದೆ. ಲೋಕಸಭೆಯ ಒಟ್ಟು ಸ್ಥಾನಗಳಲ್ಲಿ ಕನಿಷ್ಠ ಶೇ 10ರಷ್ಟಾದರೂ (55) ಸ್ಥಾನಗಳನ್ನು ಹೊಂದಿದ್ದರೆ ಅಧಿಕೃತ ವಿರೋಧ ಪಕ್ಷದ ನಾಯಕನ ಸ್ಥಾನ ದೊರೆಯುತ್ತದೆ.

ಅಗತ್ಯ ಸಂಖ್ಯಾಬಲ ಇಲ್ಲದ ಕಾರಣ ಕಾಂಗ್ರೆಸ್‌ಗೆ ಈ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನ ಸಿಗುವ ಸಾಧ್ಯತೆ ಇಲ್ಲ. 2014ರ ಚುನಾವಣೆಯಲ್ಲಿ ಕಾಂಗ್ರೆಸ್‌ ಕೇವಲ 44 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಹೀಗಾಗಿ ವಿರೋಧ ಪಕ್ಷದ ಸ್ಥಾನ ನೀಡಲು ಎನ್‌ಡಿಎ ಸರ್ಕಾರ ನಿರಾಕರಿಸಿತ್ತು.

ಕೇಂದ್ರ ಸರ್ಕಾರದ ಅತ್ಯಂತ ಪ್ರಮುಖ ನೇಮಕಾತಿ ಸಮಿತಿಗಳಲ್ಲಿ ವಿರೋಧ ಪಕ್ಷದ ನಾಯಕನಿಗೆ ಮಹತ್ವದ ಸ್ಥಾನವಿದೆ. ಲೋಕಪಾಲ, ಕೇಂದ್ರ ಜಾಗೃತ ಆಯೋಗ, ಸಿಬಿಐ ನಿರ್ದೇಶಕರ ನೇಮಕಾತಿಯಲ್ಲಿ ವಿರೋಧ ಪಕ್ಷದ ನಾಯಕ ಮಹತ್ವದ ಪಾತ್ರವಹಿಸುತ್ತಾರೆ. 2014ರಲ್ಲಿ ಕಾಂಗ್ರೆಸ್‌ನ ತೀವ್ರ ಆಗ್ರಹದ ನಂತರ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಈ ಸಮಿತಿಗಳಲ್ಲಿ ಸ್ಥಾನ ಕಲ್ಪಿಸಲಾಯಿತು. ಆದರೆ ವಿರೋಧ ಪಕ್ಷದ ನಾಯಕನ ಸ್ಥಾನ ನೀಡಿರಲಿಲ್ಲ. ಆದರೆ ಖರ್ಗೆ ಅವರಿಗೆ ಕಾಂಗ್ರೆಸ್‌ ಸಂಸದೀಯ ಪಕ್ಷದ ನಾಯಕನ ಸ್ಥಾನ ನೀಡಲಾಗಿತ್ತು.

ADVERTISEMENT

ಈ ಬಾರಿ ಈ ಸ್ಥಾನ ಯಾರಿಗೆ ಸಿಗಲಿದೆ ಎಂಬುದೂ ಈಗ ಚರ್ಚೆಯ ವಿಷಯವಾಗಿದೆ. ಖರ್ಗೆ ಅವರು ಸೋತಿರುವುದರಿಂದ ಲೋಕಸಭೆಯಲ್ಲಿ ಅವರು ಇಲ್ಲ. ಆರೋಗ್ಯ ಸರಿಯಿಲ್ಲದ ಕಾರಣ ಸೋನಿಯಾ ಗಾಂಧಿ ಅವರು ಈ ಜವಾಬ್ದಾರಿ ಹೊರುವ ಸಾಧ್ಯತೆ ಕಡಿಮೆ. ಪಕ್ಷ ಹೀನಾಯವಾಗಿ ಸೋತಿರುವುದರಿಂದ ರಾಹುಲ್ ಈ ಹೊಣೆ ಹೊರುವ ಸಾಧ್ಯತೆ ಕಡಿಮೆ. ಚುನಾವಣೆಯಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಅವರೂ ಸೋತಿರುವುದರಿಂದ ಕಾಂಗ್ರೆಸ್‌ ಸಂಸದೀಯ ಪಕ್ಷದಲ್ಲಿ ಹಿರಿಯ ಮತ್ತು ಪ್ರಬಲ ನಾಯಕರು ಉಳಿದಿಲ್ಲ.

ಹೀಗಾಗಿ ತಿರುವನಂತಪುರ ಸಂಸದ ಶಶಿ ತರೂರ್ ಅಥವಾ ಆನಂದಪುರ ಸಾಹಿಬ್‌ ಸಂಸದ ಮನೀಷ್ ತಿವಾರಿ ಅವರು ಈ ಹೊಣೆ ಹೊರುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.