
ಬಂಧನ (ಸಾಂದರ್ಭಿಕ ಚಿತ್ರ)
ಕೊಚ್ಚಿ, ಕೇರಳ (ಪಿಟಿಐ): ಅಂಗಾಂಗ ಕಸಿಗಾಗಿ ಜನರನ್ನು ಇರಾನ್‌ಗೆ ಕಳ್ಳಸಾಗಣೆ ಮಾಡಿದ ಪ್ರಮುಖ ಆರೋಪಿಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಂಧಿಸಿದೆ.
‘ನವೆಂಬರ್ 8ರಂದು ಇರಾನ್‌ನಿಂದ ಕೊಚ್ಚಿಗೆ ಬಂದಿಳಿದ ಎರ್ನಾಕುಲಂ ಮೂಲದ ಮಧು ಜಯಕುಮಾರ್ ಅವರನ್ನು ಬಂಧಿಸಲಾಯಿತು’ ಎಂದು ಮೂಲಗಳು ತಿಳಿಸಿವೆ.
ಮಧು ಅವರನ್ನು ನ.12ರಂದು ಕೊಚ್ಚಿಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯವು, ನ.19ರವರೆಗೆ ಎನ್‌ಐಎ ಕಸ್ಟಡಿಗೆ ಒಪ್ಪಿಸಿದೆ.
ಆತನನ್ನು ವಶಕ್ಕೆ ಪಡೆದಿರುವ ಎನ್‌ಐಎ ಅಧಿಕಾರಿಗಳು ಕೊಚ್ಚಿಯ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಿದ್ದಾರೆ.
ಅಂಗಾಂಗ ಕಳ್ಳಸಾಗಣೆ ಜಾಲದಲ್ಲಿ ಭಾಗಿಯಾದ ಶಂಕೆ ಆಧರಿಸಿ ಕೊಚ್ಚಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2024ರ ಮೇ 18ರಂದು ಯುವಕನೊಬ್ಬನನ್ನು ಬಂಧಿಸಲಾಗಿತ್ತು. ಆರಂಭದಲ್ಲಿ ಎರ್ನಾಕುಲಂನ ಗ್ರಾಮೀಣ ಪೊಲೀಸರೇ ವಿಚಾರಣೆ ನಡೆಸಿದ್ದರು. ಬಳಿಕ ಈ ಪ್ರಕರಣವನ್ನು ಎನ್‌ಐಎಗೆ ವಹಿಸಲಾಗಿತ್ತು.
ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬದ ಸದಸ್ಯರನ್ನು ಪತ್ತೆಹಚ್ಚುತ್ತಿದ್ದ ಆರೋಪಿಯು, ಕಾನೂನುಬದ್ಧ ಅಂಗಾಂಗ ದಾನದ ಆಮಿಷವೊಡ್ಡಿ ಇರಾನ್‌ಗೆ ಕರೆದೊಯ್ಯುತ್ತಿದ್ದ. ಅವರನ್ನು ಅಲ್ಲಿಗೆ ಕರೆದೊಯ್ದು, ಇರಾನ್‌ನ ಆಸ್ಪತ್ರೆಗಳಲ್ಲಿ ಅಗತ್ಯಬಿದ್ದವರಿಗೆ ಅಂಗಾಂಗ ಕಸಿ ಮಾಡಿಸುತ್ತಿದ್ದ.
ಈ ಅಕ್ರಮವನ್ನು ಪತ್ತೆಹಚ್ಚಿದ ಎನ್‌ಐಎ ಕಳೆದ ವರ್ಷ ಮಧು, ಸಬಿತ್ ಹಾಗೂ ಸಜಿತ್ ಶ್ಯಾಮ್ ಹಾಗೂ ಬೆಲ್ಲಂಕೊಂಡ ರಾಮ್‌ಪ್ರಸಾದ್ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿತ್ತು. 2025ರ ಫೆಬ್ರುವರಿ ತಿಂಗಳಲ್ಲಿ ಇರಾನ್‌ನ ನೆಲಸಿದ್ದ ಮಧು ವಿರುದ್ಧ ಇಂಟರ್‌ಪೋಲ್ ರೆಡ್‌ಕಾರ್ನರ್ ನೋಟಿಸ್ ಜಾರಿ ಮಾಡಿತ್ತು.
ಮಧು ಬಂಧನದಿಂದ ಅಂಗಾಂಗ ಕಸಿಗಾಗಿ ಜನರ ಕಳ್ಳಸಾಗಣೆ ಮಾಡಿದ್ದ ಪ್ರಮುಖ ಆರೋಪಿ ಸಿಕ್ಕಿದಂತಾಗಿದೆ. ಈತನೇ ಇರಾನ್‌ನಲ್ಲಿರುವ ಆಸ್ಪತ್ರೆಗಳ ನಡುವೆ ಸಮನ್ವಯ ಸಾಧಿಸಿದ್ದ’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.