ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ
–ಪಿಟಿಐ ಚಿತ್ರ
ನವದೆಹಲಿ: ಎಟಿಎಂನಲ್ಲಿ ಗ್ರಾಹಕರು ನಗದು ಪಡೆಯುವುದರ ಮೇಲಿನ ಶುಲ್ಕವನ್ನು ಹೆಚ್ಚಿಸಲು ಬ್ಯಾಂಕ್‌ಗಳಿಗೆ ಆರ್‌ಬಿಐ ಅವಕಾಶ ನೀಡಿರುವ ಬಗ್ಗೆ ಮೋದಿ ಸರ್ಕಾರವನ್ನು ಶನಿವಾರ ಟೀಕಿಸಿರುವ ಕಾಂಗ್ರೆಸ್, ‘ಜನರ ಹಣವನ್ನು ಕೊಳ್ಳೆಹೊಡೆಯಲು ಬ್ಯಾಂಕ್‌ಗಳನ್ನು ‘ಕಲೆಕ್ಷನ್ ಏಜೆಂಟ್’ಗಳನ್ನಾಗಿ ಮಾಡಲಾಗಿದೆ’ ಎಂದು ಹೇಳಿದೆ.
‘ಸಂಕಟವೊಡ್ಡುವ ಬೆಲೆ ಏರಿಕೆ ಮತ್ತು ನಿರಂತರ ಲೂಟಿಯು ಬಿಜೆಪಿಯ ಮಂತ್ರವಾಗಿದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಉಳಿತಾಯ ಖಾತೆ ಮತ್ತು ಜನಧನ್ ಖಾತೆಯಲ್ಲಿ ಕನಿಷ್ಠ ಠೇವಣಿ ಮೊತ್ತ ಹೊಂದಿರದ ಕಾರಣಕ್ಕೆ 2018ರಿಂದ 2024ರ ಅವಧಿಯಲ್ಲಿ ₹43,500 ಕೋಟಿಯಷ್ಟು ಹಣವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಕೊಳ್ಳೆಹೊಡೆದಿದೆ’ ಎಂದು ಖರ್ಗೆ ಆರೋಪಿಸಿದ್ದಾರೆ.
‘ಇತರ ಶುಲ್ಕದ ಹೆಸರಿನಲ್ಲಿ ಬ್ಯಾಂಕ್‌ಗಳು ಗ್ರಾಹಕರ ಹಣವನ್ನು ಪಡೆದುಕೊಳ್ಳುತ್ತಿವೆ. ಈ ಕುರಿತಾದ ದತ್ತಾಂಶಗಳನ್ನು ಕೇಂದ್ರ ಸರ್ಕಾರವು ಸಂಸತ್ತಿಗೆ ತಿಳಿಸುವ ಪದ್ಧತಿಯಿತ್ತು. ಆದರೆ ಈಗ ಆರ್‌ಬಿಐ ಈ ಕುರಿತಾದ ದತ್ತಾಂಶಗಳನ್ನು ಸಂಗ್ರಹಿಸುತ್ತಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.