ADVERTISEMENT

ಸೋಮವಾರ ದೆಹಲಿ ತಲುಪಲಿದೆ 70 ಟನ್‌ ಆಮ್ಲಜನಕ ಒಳಗೊಂಡ ‘ಆಕ್ಸಿಜನ್ ಎಕ್ಸ್‌ಪ್ರೆಸ್’

4 ಟ್ಯಾಂಕರ್‌ಗಳು ರಾಜಧಾನಿಗೆ

ಪಿಟಿಐ
Published 25 ಏಪ್ರಿಲ್ 2021, 13:56 IST
Last Updated 25 ಏಪ್ರಿಲ್ 2021, 13:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘70 ಟನ್‌ಗಳಷ್ಟು ಆಮ್ಲಜನಕವಿರುವ ನಾಲ್ಕು ಟ್ಯಾಂಕರ್‌ಗಳ ಮೊದಲ ‘ಆಕ್ಸಿಜನ್ ಎಕ್ಸ್‌ಪ್ರೆಸ್’ ರೈಲು ಭಾನುವಾರ ರಾಯಘಡದ ಜಿಂದಾಲ್ ಸ್ಟೀಲ್ ವರ್ಕ್ಸ್ ಸ್ಥಾವರದಿಂದ ತೆರಳಿದ್ದು, ಸೋಮವಾರ ರಾತ್ರಿ ದೆಹಲಿಗೆ ತಲುಪುವ ನಿರೀಕ್ಷೆ ಇದೆ’ಎಂದು ಕೇಂದ್ರ ರೈಲ್ವೆ ಮಂಡಳಿಯ ಅಧ್ಯಕ್ಷ ಸುನೀತ್ ಶರ್ಮಾ ತಿಳಿಸಿದ್ದಾರೆ.

‘ವೈದ್ಯಕೀಯ ಅಮ್ಲಜನಕವನ್ನು ಅಂಗುಲ್, ಕಾಳಿಂಗನಗರ, ರೂರ್ಕೆಲಾ ಮತ್ತು ರಾಯಘಡದ ಮೂಲಕ ದೆಹಲಿ ಮತ್ತು ಎನ್‌ಸಿಆರ್ ಪ್ರದೇಶಕ್ಕೆ ಸಾಗಿಸುವ ಯೋಜನೆಯನ್ನು ರೈಲ್ವೆ ಮಂಡಳಿ ರೂಪಿಸಿದೆ. ಆಮ್ಲಜನಕವನ್ನು ಪಡೆಯಲು ರಸ್ತೆಗಳಲ್ಲಿ ಟ್ಯಾಂಕರ್‌ಗಳನ್ನು ಸಿದ್ಧಗೊಳಿಸಲು ದೆಹಲಿ ಸರ್ಕಾರಕ್ಕೆ ಸೂಚಿಸಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ದೆಹಲಿ ಸರ್ಕಾರವು, ರೈಲ್ವೆಗೆ ಬರೆದ ಪತ್ರದಲ್ಲಿ ಒಟ್ಟು ಒಂಬತ್ತು ಸ್ಥಳಗಳಿಂದ ವೈದ್ಯಕೀಯ ಆಮ್ಲಜನಕವನ್ನು ಲೋಡ್ ಮಾಡಲು ಕೋರಿದೆ. ಇದನ್ನು ಪರಿಶೀಲಿಸಲಾಗಿದ್ದು, ಇದುವರೆಗೆ 7 ಸ್ಥಳಗಳಲ್ಲಿ ಆಮ್ಲಜನಕ ಸಾಗಿಸಬಹುದು ಎಂದು ತಿಳಿಸಲಾಗಿದೆ. ಇತರ ಎರಡು ಸ್ಥಳಗಳಲ್ಲಿ ತಾಂತ್ರಿಕ ಕಾರಣಗಳಿಂದಾಗಿ ಆಮ್ಲಜನಕ ಸಾಗಿಸಲು ಸಾಧ್ಯವಾಗಿಲ್ಲ’ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಕೋವಿಡ್‌ನಿಂದಾಗಿ ದೆಹಲಿಯಲ್ಲಿ 348 ಸಾವುಗಳು ವರದಿಯಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿನ ಆಸ್ಪತ್ರೆಗಳಲ್ಲಿ ವೈದ್ಯಕೀಯ ಆಮ್ಲಜನಕದ ತೀವ್ರ ಕೊರತೆ ಎದುರಾಗಿದೆ. 24 ಗಂಟೆಗಳ ಅವಧಿಯಲ್ಲಿ ದೆಹಲಿಯಲ್ಲಿ 24,331 ಹೊಸ ಪ್ರಕರಣಗಳು ವರದಿಯಾಗಿವೆ ಎಂದು ಮೂಲಗಳು ತಿಳಿಸಿವೆ.

ದೇಶದಲ್ಲಿ ಕೋವಿಡ್ ಪ್ರಕರಣಗಳು ದಾಖಲೆಯ ಮಟ್ಟದಲ್ಲಿ ಏರಿಕೆಯಾದ ಬಳಿಕ ಆಮ್ಲಜನಕಕ್ಕೆ ಹೆಚ್ಚಿನ ಬೇಡಿಕೆ ಉಂಟಾಗಿದೆ. ಹಾಗಾಗಿ, ರೈಲ್ವೆ ಇಲಾಖೆಯು ದೇಶದಾದ್ಯಂತ ವೈದ್ಯಕೀಯ ದ್ರವ ಆಮ್ಲಜನಕ ಮತ್ತು ಆಮ್ಲಜನಕದ ಸಿಲಿಂಡರ್‌ಗಳನ್ನು ಸಾಗಿಸಲು ‘ಆಕ್ಸಿಜನ್ ಎಕ್ಸ್‌ಪ್ರೆಸ್’ ರೈಲುಗಳನ್ನು ಓಡಿಸಲು ನಿರ್ಧರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.