
ನವದೆಹಲಿ: ಕೇಂದ್ರ ಸರ್ಕಾರವು ಈ ಬಾರಿಯ ‘ಪದ್ಮ’ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡುವಾಗ ಕೇರಳ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡಿದೆ ಎಂದು ವಿಶ್ಲೇಷಿಸಲಾಗಿದೆ.
ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್.ಅಚ್ಯುತಾನಂದನ್, ಬಿಜೆಪಿಯ ಮುಖವಾಣಿ ಎನಿಸಿರುವ ಮಲಯಾಳ ಪತ್ರಿಕೆ ‘ಜನ್ಮಭೂಮಿ’ಯ ಸಹ ಸ್ಥಾಪಕ ಮತ್ತು ಪ್ರಧಾನ ಸಂಪಾದಕ ಪಿ.ನಾರಾಯಣನ್, ಒಬಿಸಿ ನಾಯಕ ವೆಲ್ಲಪ್ಪಳ್ಳಿ ನಟೇಶನ್ ಮತ್ತು ನಟ ಮಮ್ಮುಟ್ಟಿ ಅವರು ಪ್ರಶಸ್ತಿ ಪುರಸ್ಕೃತರಲ್ಲಿ ಸೇರಿದ್ದಾರೆ.
ಸಂಘ ಪರಿವಾರದ ಪ್ರಮುಖ ಟೀಕಾಕಾರರಲ್ಲಿ ಒಬ್ಬರಾಗಿದ್ದ ಅಚ್ಯುತಾನಂದನ್ (ಮರಣೋತ್ತರವಾಗಿ) ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಿಪಿಎಂ ಅನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಅಚ್ಯುತಾನಂದನ್ ಅವರ ಕುಟುಂಬವು ಕೇಂದ್ರ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದೆ. 2022ರಲ್ಲಿ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ದದೇವ್ ಭಟ್ಟಾಚಾರ್ಯ ಅವರು ‘ಪದ್ಮ’ ಪ್ರಶಸ್ತಿಯನ್ನು ನಿರಾಕರಿಸಿದ್ದರು.
ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್‌ಎನ್‌ಡಿಪಿ) ಪ್ರಧಾನ ಕಾರ್ಯದರ್ಶಿ ವೆಲ್ಲಪ್ಪಳ್ಳಿ ನಟೇಶನ್ ಅವರ ಆಯ್ಕೆಯು ಚುನಾವಣೆ ನಡೆಯಲಿರುವ ಕೇರಳದಲ್ಲಿ ರಾಜಕೀಯ ಮಹತ್ವವನ್ನು ಪಡೆದುಕೊಂಡಿದೆ.
ಎಸ್‌ಎನ್‌ಡಿಪಿಯು ಕೇರಳದ ಅತಿದೊಡ್ಡ ಹಿಂದೂ ಸಮುದಾಯ ಎನಿಸಿರುವ ‘ಹಿಂದೂ ಈಳವ’ರನ್ನು ಪ್ರತಿನಿಧಿಸುವ ವೇದಿಕೆಯಾಗಿದೆ. ಕಳೆದ ಕೆಲವು ಚುನಾವಣೆಗಳಲ್ಲಿ ಹಿಂದೂ ಈಳವ ಮತಗಳು ಬಿಜೆಪಿಗೆ ಹೋಗುತ್ತಿರುವ ಬಗ್ಗೆ ಸಿಪಿಎಂ ಕಳವಳ ವ್ಯಕ್ತಪಡಿಸಿತ್ತು.
ನಟೇಶನ್ ಅವರ ಪುತ್ರ ತುಷಾರ್ ವೆಲ್ಲಪ್ಪಳ್ಳಿ ಅವರು ಕೇರಳದಲ್ಲಿ ಬಿಜೆಪಿಯ ಪ್ರಮುಖ ಮಿತ್ರಪಕ್ಷವಾಗಿರುವ ಭಾರತ್ ಧರ್ಮ ಜನ ಸೇನಾದ ಅಧ್ಯಕ್ಷರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.