ADVERTISEMENT

ಕಾಶ್ಮೀರದಲ್ಲಿ ಶಾಂತಿ: ಸಂಕಥನಕ್ಕೆ ಪೆಟ್ಟು ಕೊಟ್ಟ ಪಹಲ್ಗಾಮ್‌ ದಾಳಿ!

ಕಣಿವೆಯಲ್ಲಿ ಶಾಂತಿ ಸ್ಥಾಪನೆಗೆ ಇಲ್ಲದ ನೇರ ಮಾರ್ಗ, ಅಡ್ಡಿಗಳೇ ಹೆಚ್ಚು ಎಂದ ರಾಜ್ಯಶಾಸ್ತ್ರ ಪರಿಣತ

ಝುಲ್ಫಿಕರ್ ಮಜಿದ್
Published 6 ಮೇ 2025, 1:09 IST
Last Updated 6 ಮೇ 2025, 1:09 IST
ಪೂಂಛ್ ಜಿಲ್ಲೆಯಲ್ಲಿ ನಿಯಂತ್ರಣ ರೇಖೆಯ ಬಳಿ ಬಂದೋಬಸ್ತ್ ಹೆಚ್ಚಿಸಲಾಗಿದೆ –ಪಿಟಿಐ ಚಿತ್ರ
ಪೂಂಛ್ ಜಿಲ್ಲೆಯಲ್ಲಿ ನಿಯಂತ್ರಣ ರೇಖೆಯ ಬಳಿ ಬಂದೋಬಸ್ತ್ ಹೆಚ್ಚಿಸಲಾಗಿದೆ –ಪಿಟಿಐ ಚಿತ್ರ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಯು ಬಹಳ ದೀರ್ಘಾವಧಿಯ ಪ್ರಕ್ರಿಯೆ ಆಗಬಹುದು ಎಂಬುದನ್ನು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯು ಮತ್ತೊಮ್ಮೆ ತೋರಿಸಿಕೊಟ್ಟಿದೆ.

ಸಂವಿಧಾನದ 370ನೆಯ ವಿಧಿಯ ಅಡಿಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದ ನಂತರದ ಆಡಳಿತ ಹಾಗೂ ಭದ್ರತಾ ವ್ಯವಸ್ಥೆಯನ್ನು ಈ ದಾಳಿಯು ಬದಲಾಯಿಸುವುದಿಲ್ಲವಾದರೂ, 2019ರ ಆಗಸ್ಟ್‌ ನಂತರದಲ್ಲಿ ಪರಿಸ್ಥಿತಿ ಶಾಂತವಾಗುತ್ತಿದೆ ಎಂದು ಕೇಂದ್ರ ಸರ್ಕಾರ ಕಟ್ಟಿದ್ದ ಸಂಕಥನವನ್ನು ದಾಳಿಯು ಸುಳ್ಳಾಗಿಸಿದೆ.

ಕಣಿವೆಯಲ್ಲಿ ಭಯೋತ್ಪಾದನೆ ಪೋಷಿಸುವ ಹಾಗೂ ಪ್ರತ್ಯೇಕತಾವಾದವನ್ನು ಬೆಳೆಸುವ ವ್ಯವಸ್ಥೆಯು ವಿಶೇಷ ಸ್ಥಾನಮಾನ ಹಿಂಪಡೆದಿದ್ದರಿಂದಾಗಿ ಇನ್ನಿಲ್ಲವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರು ಮತ್ತೆ ಮತ್ತೆ ಹೇಳಿದ್ದರು. ವಿಶೇಷ ಸ್ಥಾನಮಾನ ರದ್ದುಪಡಿಸಿದ ಪರಿಣಾಮವಾಗಿ ಅಲ್ಲಿಗೆ ಹೂಡಿಕೆ ಬರುತ್ತದೆ, ಶಾಂತಿ ನೆಲಸುತ್ತದೆ ಎಂದೂ ಅವರು ಹೇಳಿದ್ದರು.

ADVERTISEMENT

ಒಂದಿಷ್ಟು ಪ್ರಗತಿ ಆಗಿರುವುದು ನಿಜ. ಕಾಶ್ಮೀರದ ನಗರ ಪ್ರದೇಶಗಳಲ್ಲಿ ಹಿಂದೊಮ್ಮೆ ಪ್ರತಿನಿತ್ಯ ವರದಿಯಾಗುತ್ತಿದ್ದ ಕಲ್ಲು ತೂರಾಟ, ಪ್ರತಿಭಟನೆಗಳು ಈಗ ಬಹುತೇಕ ಇಲ್ಲವಾಗಿವೆ. ಉಗ್ರರ ಸಂಘಟನೆಗಳಿಗೆ ಇಲ್ಲಿನವರು ಸೇರುವುದು ಗಣನೀಯವಾಗಿ ಕಡಿಮೆಯಾಗಿದೆ. ಗಡಿಯಾಚೆಯಿಂದ ನುಸುಳುವಿಕೆಯು ಕೂಡ ಕಡಿಮೆ ಆಗಿದೆ.

ನಿರಂತರವಾಗಿ ನಡೆದ ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳ ಫಲವಾಗಿ ಉಗ್ರರ ಹಲವು ಜಾಲಗಳು ಧ್ವಂಸಗೊಂಡಿವೆ. ಹಿಂಸಾಚಾರ ಮತ್ತು ಬಂದ್‌ಗಳಿಂದಾಗಿ ಪೆಟ್ಟು ತಿಂದಿದ್ದ ಇಲ್ಲಿನ ಪ್ರವಾಸೋದ್ಯಮವು 2022, 2023, 2024 ಮತ್ತು ಈ ವರ್ಷದ ಆರಂಭದಲ್ಲಿ ದಾಖಲೆಯ ಮಟ್ಟ ತಲುಪಿತ್ತು.

ಕಣಿವೆ ರಾಜ್ಯವನ್ನು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಭಜಿಸಿದ ನಂತರದಲ್ಲಿ 2024ರಲ್ಲಿ ಮೊದಲ ವಿಧಾನಸಭಾ ಚುನಾವಣೆ ನಡೆಯಿತು. ಅದು ಶಾಂತಿಯುತವಾಗಿ ಮುಕ್ತಾಯಗೊಂಡಿದ್ದುದನ್ನು ಐತಿಹಾಸಿಕ ಎಂದು ಬಣ್ಣಿಸಲಾಗಿದೆ. ಆದರೆ, ಈ ಎಲ್ಲ ಯಶಸ್ಸುಗಳ ಮೇಲೆ ಪಹಲ್ಗಾಮ್‌ ದಾಳಿಯು ಮಣ್ಣೆರಚುವ ಕೆಲಸ ಮಾಡಿದೆ.

ಬಹುಕಾಲದಿಂದ ಸುರಕ್ಷಿತ ಎಂಬ ಭಾವಿಸಿದ್ದ ಪ್ರದೇಶದಲ್ಲಿ, ಅಮರನಾಥ ಯಾತ್ರೆ ಆರಂಭವಾಗುವ ಕೆಲವು ವಾರಗಳ ಮೊದಲು ನಡೆದಿರುವ ಈ ದಾಳಿಯು ಗುಪ್ತಚರ ಮಾಹಿತಿ ಕಲೆಹಾಕುವಲ್ಲಿನ ಲೋಪಗಳನ್ನು, ಭದ್ರತಾ ಏಜೆನ್ಸಿಗಳ ನಡುವಿನ ಸಮನ್ವಯದಲ್ಲಿ ಕೊರತೆಗಳು ಇರುವುದನ್ನು ತೋರಿಸಿದೆ. ಇವೆಲ್ಲಕ್ಕಿಂತ ಹೆಚ್ಚಾಗಿ, ಕಾಶ್ಮೀರದಲ್ಲಿ ಶಾಂತಿಗೆ ಭಂಗ ಇಲ್ಲ ಎಂಬ ಭರವಸೆಗೆ ಪೆಟ್ಟು ಕೊಟ್ಟಿದೆ.

‘ಯಶಸ್ಸುಗಳಿಗೆ ಅನುಗುಣವಾಗಿ ರಾಜಕೀಯವಾಗಿ ಹಾಗೂ ಭದ್ರತಾ ದೃಷ್ಟಿಯಿಂದ ಒಂದಿಷ್ಟು ಹೊಂದಾಣಿಕೆಗಳು ಆಗಬೇಕಿತ್ತು’ ಎಂದು ಕಾಶ್ಮೀರ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಮಾಜಿ ಮುಖ್ಯಸ್ಥ ಪ್ರೊ. ಗುಲ್ ವಾನಿ ಹೇಳುತ್ತಾರೆ. ‘ಪ್ರಜಾತಂತ್ರ ಬೇರುಬಿಡಬೇಕು ಎಂದಾದರೆ ಪ್ರಾತಿನಿಧ್ಯ ನೀಡುವ ಸಂಸ್ಥೆಗಳಿಗೆ ನಿಜವಾದ ಅಧಿಕಾರ ಸಿಗಬೇಕು’ ಎನ್ನುವುದು ಅವರ ವಿಶ್ಲೇಷಣೆ.

ಸ್ಥಿರತೆ ಮತ್ತು ಅವಕಾಶವನ್ನು ಕಾಶ್ಮೀರದ ಯುವಕರು ಬಹಳ ಬಯಸುತ್ತಿದ್ದಾರೆ. ಆದರೆ, ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಗೆ ಬಹಳ ನೇರವಾದ ಮಾರ್ಗ ಇಲ್ಲ; ಅಡ್ಡಿಗಳು ಬಹಳಷ್ಟಿವೆ ಎಂದು ಪ್ರೊ. ವಾನಿ ಹೇಳಿದರು.

ಪಹಲ್ಗಾಮ್‌ ದಾಳಿಯನ್ನು ಮುಂದಿಟ್ಟುಕೊಂಡು ಕಾಶ್ಮೀರದಲ್ಲಿ ಉಗ್ರರ ಚಟುವಟಿಕೆಗಳು ವ್ಯಾಪಕವಾಗಿವೆ ಎನ್ನುವುದು ಕೂಡ ಸರಿಯಲ್ಲ ಎಂದು ಹಿರಿಯ ಭದ್ರತಾ ಅಧಿಕಾರಿಗಳು ಹೇಳುತ್ತಾರೆ. ‘ಒಂದು ಭಯೋತ್ಪಾದಕ ದಾಳಿಯು 1990ರ ದಶಕದಲ್ಲಿ ಇದ್ದಂತಹ ಉಗ್ರಗಾಮಿ ಚಟುವಟಿಕೆಗಳನ್ನಾಗಲೀ, 2016ರಲ್ಲಿ ಬುರ್ಹಾನ್‌ ವಾನಿ ಹತ್ಯೆಯ ನಂತರ ಕಂಡುಬಂದ ಅಶಾಂತಿಯನ್ನಾಗಲೀ ಬಿಂಬಿಸುವುದಿಲ್ಲ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಒಂದು ಘಟನೆಯನ್ನು ಅಥವಾ ಕೆಲವು ಘಟನೆಗಳನ್ನು ಆಧಾರವಾಗಿ ಇರಿಸಿಕೊಂಡು, ಇತರ ಸಂದರ್ಭಗಳಲ್ಲಿ ಶಾಂತಿ ನೆಲಸಿದ್ದುದನ್ನು ಅಲ್ಲಗಳೆಯುವುದು ಸರಿಯಲ್ಲ. ಹಾಗೆ ಮಾಡಿದಾಗ, ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆ ಆಗುವುದಿಲ್ಲ ಎಂದು ಚಿತ್ರಿಸಲು ಬಯಸುವವರ ತಾಳಕ್ಕೆ ತಕ್ಕಂತೆ ಕುಣಿದಂತೆ ಆಗುತ್ತದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.