ಅಮರಾವತಿ: ಕೋಮುವಾದಿ ವಿಡಿಯೊ ಹಂಚಿಕೊಂಡ ಆರೋಪದ ಮೇಲೆ ಹರಿಯಾಣದ ಗುರುಗ್ರಾಮದಿಂದ ಬಂಧಿಸಲ್ಪಟ್ಟ ಸಾಮಾಜಿಕ ಮಾಧ್ಯಮ ಇನ್‌ಫ್ಲುಯೆನ್ಸರ್ ಶರ್ಮಿಷ್ಠ ಪನೋಲಿ ಪ್ರಕರಣದಲ್ಲಿ ನ್ಯಾಯಯುತವಾಗಿ ವರ್ತಿಸುವಂತೆ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಪಶ್ಚಿಮ ಬಂಗಾಳ ಪೊಲೀಸರಿಗೆ ಮನವಿ ಮಾಡಿದ್ದಾರೆ.
ಧರ್ಮ ನಿಂದನೆಯನ್ನು ಖಂಡಿಸಬೇಕು. ಆದರೆ, ಜಾತ್ಯತೀತತೆಯನ್ನು ಗುರಾಣಿಯಾಗಿ ಬಳಸಬಾರದು ಎಂದು ಉಪಮುಖ್ಯಮಂತ್ರಿ ಪ್ರತಿಪಾದಿಸಿದ್ದಾರೆ.
ಧರ್ಮ ನಿಂದನೆಯನ್ನು ಯಾವಾಗಲೂ ಖಂಡಿಸಬೇಕು! ಜಾತ್ಯತೀತತೆಯು ಕೆಲವರಿಗೆ ಗುರಾಣಿಯಲ್ಲ ಮತ್ತು ಇತರರಿಗೆ ಕತ್ತಿಯಲ್ಲ. ಅದು ದ್ವಿಮುಖ ರಸ್ತೆಯಾಗಿರಬೇಕು. ರಾಷ್ಟ್ರವು ನೋಡುತ್ತಿದೆ. ಪಶ್ಚಿಮ ಬಂಗಾಳ ಪೊಲೀಸರು ನ್ಯಾಯಯುತವಾಗಿ ವರ್ತಿಸಬೇಕು ಎಂದು ಪವನ್ ಕಲ್ಯಾಣ್ ಎಕ್ಸ್ ಪೋಸ್ಟ್‌ನಲ್ಲಿ ಕರೆ ನೀಡಿದ್ದಾರೆ.
ಕಾನೂನು ವಿದ್ಯಾರ್ಥಿನಿ ಶರ್ಮಿಷ್ಠ, ಆಪರೇಷನ್ ಸಿಂಧೂರದ ನಂತರ ಕೆಲವರ ಬಗ್ಗೆ ವಿಷಾದಕರ ಮತ್ತು ನೋವುಂಟುಮಾಡುವ ಮಾತುಗಳನ್ನು ಆಡಿದ್ದಾರೆ. ಬಳಿಕ, ತಮ್ಮ ತಪ್ಪನ್ನು ಅರಿತುಕೊಂಡು ವಿಡಿಯೊ ಡಿಲೀಟ್ ಮಾಡಿ ಕ್ಷಮೆ ಕೇಳಿದ್ದಾರೆ. ಆದರೂ ಪಶ್ಚಿಮ ಬಂಗಾಳದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ ಎಂದೂ ಅವರು ತಿಳಿಸಿದ್ಧಾರೆ.
ಶರ್ಮಿಷ್ಟ ಪನೋಲಿಯನ್ನು ಶೀಘ್ರವೇ ಬಿಡುಗಡೆ ಮಾಡಬೇಕು. ಅವರಿಗೆ, ಬೆದರಿಕೆ ಹಾಕುವ ಯತ್ನ ನಡೆಸಬಾರದು ಎಂದು ನಟಿ, ಸಂಸದೆ ಕಂಗನಾ ರನೌತ್ ಆಗ್ರಹಿಸಿದ್ದಾರೆ.
ಶರ್ಮಿಷ್ಠ ಪನೋಲಿ ಯಾರು?
22 ವರ್ಷದ ಶರ್ಮಿಷ್ಠ ಪನೋಲಿ, ಪುಣೆ ಕಾನೂನು ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿರುವ ಕಾನೂನು ವಿದ್ಯಾರ್ಥಿನಿ. ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ಜನಪ್ರಿಯ ಇನ್‌ಸ್ಟಾಗ್ರಾಮ್ ಇನ್‌ಫ್ಲುಯೆನ್ಸರ್. ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ದಾಳಿಕೋರರನ್ನು ಸಮರ್ಥಿಸುವ ಪಾಕಿಸ್ತಾನಿ ಅನುಯಾಯಿಯ ಕಾಮೆಂಟ್‌ಗಳಿಗೆ ಪ್ರತಿಕ್ರಿಯೆಯಾಗಿ ಅವರು ಮಾಡಿದ್ದ ವಿವಾದಾತ್ಮಕ ವಿಡಿಯೊವನ್ನು ಪೋಸ್ಟ್ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು.
ಈಗ ವಿವಾದಕ್ಕೆ ಕಾರಣವೇನು?
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರದ ಮಿಲಿಟರಿ ಕಾರ್ಯಾಚರಣೆಯಾದ ಆಪರೇಷನ್ ಸಿಂಧೂರದ ಬಗ್ಗೆ ಬಾಲಿವುಡ್ ಸೆಲೆಬ್ರಿಟಿಗಳು ಮೌನ ವಹಿಸಿದ್ದಕ್ಕಾಗಿ ಅವರು ತಮ್ಮ ವಿಡಿಯೊದಲ್ಲಿ ಟೀಕಿಸಿದ್ದರು. ಅಲ್ಲದೆ, ಅವರು ಇಸ್ಲಾಂ ಮತ್ತು ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.