ADVERTISEMENT

ಉಗ್ರನಿಂದ ಗನ್ ಕಿತ್ತುಕೊಳ್ಳಲು ಯತ್ನ: ಗುಂಡಿಗೆ ಬಲಿಯಾದ ಕಾಶ್ಮೀರಿ ವ್ಯಕ್ತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಏಪ್ರಿಲ್ 2025, 10:48 IST
Last Updated 23 ಏಪ್ರಿಲ್ 2025, 10:48 IST
<div class="paragraphs"><p>ಸೈಯದ್‌ ಆದಿಲ್‌ ಹುಸೈನ್‌ ಶಾ</p></div>

ಸೈಯದ್‌ ಆದಿಲ್‌ ಹುಸೈನ್‌ ಶಾ

   

ಚಿತ್ರಕೃಪೆ: ಎಕ್ಸ್‌

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ವೇಳೆ ಪ್ರವಾಸಿಗರನ್ನು ರಕ್ಷಿಸಲು ಹೋಗಿ ಸ್ಥಳೀಯ ಕುದುರೆ ಸವಾರ ಸೈಯದ್‌ ಆದಿಲ್‌ ಹುಸೈನ್‌ ಶಾ(28) ಉಗ್ರರ ಗುಂಡಿಗೆ ಬಲಿಯಾಗಿದ್ದಾರೆ.

ADVERTISEMENT

ಜೀವನಾಧಾರವಾಗಿ ಹಲವು ವರ್ಷಗಳಿಂದ ಕುದುರೆ ಸವಾರಿ ಕೆಲಸ ಮಾಡುತ್ತಿದ್ದ ಆದಿಲ್, ಮಂಗಳವಾರವೂ ಪ್ರವಾಸಿಗರನ್ನು ಕುದುರೆ ಮೂಲಕ ಬೈಸರನ್‌ಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಭಯೋತ್ಪಾದಕರು ಪ್ರವಾಸಿಗರನ್ನು ಗುರಿಪಡಿಸಿ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ.

ತಮ್ಮ ಕುದುರೆ ಮೇಲಿದ್ದ ಪ್ರವಾಸಿಗನ ಮೇಲೆ ದಾಳಿ ಮಾಡಲು ಮುಂದಾದಾಗ, ಆದಿಲ್ ಉಗ್ರನ ವಿರುದ್ಧ ಹೋರಾಟಕ್ಕಿಳಿದಿದ್ದಾರೆ. ಉಗ್ರನ ಕೈಯಿಂದ ಗನ್ ಕಿತ್ತುಕೊಳ್ಳಲು ಯತ್ನಿಸಿದ ವೇಳೆ ಆದಿಲ್ ಮೇಲೆ ಉಗ್ರನು ಗುಂಡಿನ ದಾಳಿ ನಡೆಸಿದ್ದು, ಆದಿಲ್ ಮೃತಪಟ್ಟಿದ್ದಾರೆ.

ವಯಸ್ಸಾದ ಪೋಷಕರು, ಹೆಂಡತಿ ಮತ್ತು ಮಕ್ಕಳನ್ನು ಹೊಂದಿರುವ ಕುಟುಂಬಕ್ಕೆ ಆದಿಲ್ ಒಬ್ಬರೇ ಆಧಾರವಾಗಿದ್ದು, ಇದೀಗ ಆ ಕುಟುಂಬ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದೆ.

ಮಗನ ಸಾವಿನ ಬಗ್ಗೆ ಸುದ್ದಿಸಂಸ್ಥೆ ಎಎನ್ಐ ಜೊತೆ ಮಾತನಾಡಿರುವ ಆದಿಲ್ ಪೋಷಕರು, ದುಃಖವನ್ನು ಹೊರಹಾಕಿದ್ದಾರೆ.

‘ಸಂಜೆ 3 ಗಂಟೆಯ ವೇಳೆ ನನ್ನ ಮಗ ಕೆಲಸಕ್ಕೆ ತೆರಳಿದ್ದ. ನಾವು ಅವನಿಗೆ ಕರೆ ಮಾಡಿದ್ದು, ಅವನ ಪೋನ್‌ ಸ್ವಿಚ್‌ ಆಫ್‌ ಆಗಿತ್ತು. 4.40 ರ ವೇಳೆ ಆತನ ಫೋನ್‌ ರಿಂಗಣಿಸಿದ್ದು, ಕರೆ ಸ್ವೀಕರಿಸಿರಲಿಲ್ಲ. ನಂತರ ಆತ ಉಗ್ರರ ದಾಳಿಯಲ್ಲಿ ಮೃತಪಟ್ಟಿದ್ದಾನೆ ಎಂದು ತಿಳಿಯಿತು' ಎಂದಿದ್ದಾರೆ.

‘ನಮಗೆ ಇದ್ದ ಏಕೈಕ ಆಧಾರ ಅವನು. ಕುದುರೆ ಸವಾರಿ ಮಾಡಿ ದಿನಕ್ಕೆ ಸಿಗುತ್ತಿದ್ದ ₹300- ₹400ರಲ್ಲಿ ಕುಟುಂಬ ಸಲಹುತ್ತಿದ್ದನು. ಈಗ ನಮಗೆ ಸಹಾಯ ಮಾಡಲು ಬೇರೆ ಯಾರೂ ಇಲ್ಲ’ ಎಂದು ಸೈಯದ್ ಆದಿಲ್ ಶಾ ತಾಯಿ ಬೇಬಿ ಜಾನ್ ಕಣ್ಣೀರು ಸುರಿಸಿದ್ದಾರೆ.

ಆದಿಲ್ ಚಿಕ್ಕಮ್ಮ ಖಾಲಿದಾ ಪರ್ವೀನ್, 'ಈಕೆ ಪತಿಯೊಂದಿಗೆ ಈ ಮನೆಗೆ ಕಾಲಿಟ್ಟವಳು. ಈಗ ಅವನ ಮೃತದೇಹ ಬರುವುದನ್ನು ಕಾಯುತ್ತಿದ್ದಾಳೆ' ಎಂದು ಆದಿಲ್ ಪತ್ನಿಯ ಕುರಿತು ಅಳುತ್ತಾ ಹೇಳಿದ್ದಾರೆ. ಆದಿಲ್ ದಂಪತಿಯ ಪುಟ್ಟ ಮಗು ಈಚೆಗಷ್ಟೇ ಮೃತಪಟ್ಟಿತ್ತು.

ಮಂಗಳವಾರ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.