ADVERTISEMENT

‘ಪಿಒಕೆಯಲ್ಲಿ ಮೊಬೈಲ್‌ ಟವರ್‌ ಸಂಖ್ಯೆ ಹೆಚ್ಚಳ’

ಪಿಟಿಐ
Published 18 ಫೆಬ್ರುವರಿ 2024, 15:25 IST
Last Updated 18 ಫೆಬ್ರುವರಿ 2024, 15:25 IST
<div class="paragraphs"><p> ಮೊಬೈಲ್‌ ಟವರ್‌</p></div>

ಮೊಬೈಲ್‌ ಟವರ್‌

   

ಜಮ್ಮು: ಪಾಕ್‌ ಆಕ್ರಮಿತ ಕಾಶ್ಮೀರದ (ಪಿಒಕೆ) ಗಡಿ ನಿಯಂತ್ರಣ ರೇಖೆಯುದ್ದಕ್ಕೂ (ಎಲ್‌ಒಸಿ) ಪಾಕಿಸ್ತಾನವು ಹೆಚ್ಚಿನ ಸಂಖ್ಯೆಯಲ್ಲಿ ಮೊಬೈಲ್‌ ಟವರ್‌ಗಳನ್ನು ಸ್ಥಾಪಿಸುತ್ತಿದೆ ಎಂದು ಅಧಿಕಾರಿಗಳು ಆರೋಪಿಸಿದ್ದಾರೆ.

ಮೊಬೈಲ್‌ ಟವರ್‌ಗಳ ಸ್ಥಾಪನೆಯಿಂದ ಈ ಪ್ರದೇಶದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಮತ್ತು ಒಳನುಸುಳುವಿಕೆಗೆ ಅನುಕೂಲವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ADVERTISEMENT

ರಹಸ್ಯ ಸಂದೇಶಗಳನ್ನು ಕಳುಹಿಸಲು ಉಗ್ರ ಸಂಘಟನೆಗಳು ಸ್ಮಾರ್ಟ್‌ಫೋನ್‌ಗಳು ಮತ್ತು ರೇಡಿಯೊ ಸೆಟ್‌ಗಳನ್ನು ಸಂಯೋಜಿಸುವ ವೈಎಸ್‌ಎಂಎಸ್ ಸೇವೆಯನ್ನು ಬಳಸುತ್ತಿವೆ ಎಂದಿದ್ದಾರೆ.

ಜಮ್ಮು ಪ್ರದೇಶದ ದಕ್ಷಿಣ ಪೀರ್‌ ಪಂಜಾಲ್‌ ಶ್ರೇಣಿಯಲ್ಲಿ ಈಚೆಗೆ ನಡೆದ ಭಯೋತ್ಪಾದಕ ದಾಳಿಗಳು, ಒಳನುಸುಳುವಿಕೆ ಚಟುವಟಿಕೆಗಳನ್ನು ಅಧ್ಯಯನ ಮಾಡಿ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ.

ಮೊಬೈಲ್‌ ಟವರ್‌ಗಳ ಸ್ಥಾಪನೆಯಿಂದಾಗಿ ಪಿಒಕೆಯಲ್ಲಿರುವ ಭಯೋತ್ಪಾದಕ ಸಂಘಟನೆಗಳ ನಿರ್ವಾಹಕರಿಗೆ ಉಗ್ರರ ಜೊತೆಗೆ ಸಂವಹನ ನಡೆಸಲು ಅನುಕೂಲವಾಗುತ್ತಿದೆ ಎಂದು ಪ್ರತಿಪಾದಿಸಿದ್ದಾರೆ.

ಪಾಕಿಸ್ತಾನ ಸೇನೆಯ ಮೇಜರ್‌ ಜನರಲ್‌ ಉಮರ್‌ ಅಹಮ್ಮದ್‌ ಶಾ ಅವರ ನೇತೃತ್ವದ ವಿಶೇಷ ಸಂವಹನ ಸಂಸ್ಥೆಗೆ (ಎಸ್‌ಸಿಒ) ಪಿಒಕೆಯಲ್ಲಿ ಮೊಬೈಲ್‌ ಟವರ್‌ಗಳನ್ನು ಸ್ಥಾಪಿಸುವ ಯೋಜನೆಯನ್ನು ಹಸ್ತಾಂತರಿಸಲಾಗಿದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ. ಉಮರ್‌ ಅಹಮ್ಮದ್‌ ಅವರು ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್‌ಐಗಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ನಂಬಲಾಗಿದೆ.

ಎಲ್‌ಒಸಿ ಮತ್ತು ಅಂತರರಾಷ್ಟ್ರೀಯ ಗಡಿ ಸಮೀಪ ಮೊಬೈಲ್‌ ಟವರ್‌ಗಳನ್ನು ನಿರ್ಮಿಸುವ ಮೂಲಕ ವಿಶ್ವಸಂಸ್ಥೆಯ ಅಧೀನ ಸಂಸ್ಥೆಯಾದ ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟದ (ಐಟಿಯು) ನಿಬಂಧನೆಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದ್ದಾರೆ.

ಈ ವಿಚಾರವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಲು ಸಚಿವರ ಮಟ್ಟದಲ್ಲಿ ಚರ್ಚೆ ನಡೆಸಲಾಗುತ್ತಿದೆ. ವೈಎಸ್‌ಎಂಎಸ್ ಸೇವೆಗೆ ಚೀನಾದ ಕಂಪನಿಗಳು ನೆರವು ನೀಡುತ್ತಿವೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.