ADVERTISEMENT

ಭಾರತದ ಶಾಂತಿ ಯತ್ನಕ್ಕೆ ಪಾಕಿಸ್ತಾನದಿಂದ ಸದಾ ಮೋಸ: ರಾಮದಾಸ್ ಅಠವಳೆ

ಏಜೆನ್ಸೀಸ್
Published 20 ಸೆಪ್ಟೆಂಬರ್ 2020, 2:36 IST
Last Updated 20 ಸೆಪ್ಟೆಂಬರ್ 2020, 2:36 IST
ರಾಮದಾಸ್ ಅಠವಳೆ
ರಾಮದಾಸ್ ಅಠವಳೆ   

ನವದೆಹಲಿ: ಭಾರತದ ಶಾಂತಿ ಸ್ಥಾಪನೆ ಯತ್ನಕ್ಕೆ ಪಾಕಿಸ್ತಾನವು ಸದಾ ಮೋಸ ಮಾಡಿದೆ ಎಂದು ಕೇಂದ್ರ ಸಚಿವ ರಾಮದಾಸ್ ಅಠವಳೆ ಹೇಳಿದ್ದಾರೆ.

ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕು ಎಂಬ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅವರು, ‘2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸುವ ಕಾರ್ಯಕ್ರಮಕ್ಕೆ ಪಾಕಿಸ್ತಾನ ಪ್ರಧಾನಿಯನ್ನು ಆಹ್ವಾನಿಸಿದ್ದರು. ಭಾರತವು ಶಾಂತಿ ಬಯಸುತ್ತದೆ. ಮಾತುಕತೆ ಮೂಲಕ ಬಾಂಧವ್ಯ ವೃದ್ಧಿಗೆ ಒತ್ತು ನೀಡುತ್ತದೆ ಎಂಬುದು ಅವರ ಸಂದೇಶವಾಗಿತ್ತು. ಆದರೆ ಪಾಕಿಸ್ತಾನ ಮಾಡಿದ್ದೇನು? ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೂ ಮಾತುಕತೆ ಮೂಲಕ ಶಾಂತಿ ಸ್ಥಾಪನೆಗೆ ಮುಂದಾಗಿದ್ದರು. ಆಗ ಪಾಕಿಸ್ತಾನ ಏನು ಮಾಡಿತ್ತು? ಎಂದು ಸಚಿವರು ಪ್ರಶ್ನಿಸಿದ್ದಾರೆ.

ಪಾಕಿಸ್ತಾನದೊಂದಿಗೆ ಮಾತುಕತೆಗೆ ಭಾರತದ ಸಿದ್ಧವಾಗಿದೆ. ಆದರೆ, ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತಕ್ಕೆ ಹಸ್ತಾಂತರಿಸಬೇಕು. ಜಮ್ಮು–ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಅಠವಳೆ ಹೇಳಿದ್ದಾರೆ.

ಶನಿವಾರ ಲೋಕಸಭೆಯಲ್ಲಿ ಮಾತನಾಡಿದ್ದ ಅಬ್ದುಲ್ಲಾ, ಗಡಿಯಲ್ಲಿ ಪಡೆಗಳನ್ನು ಹೆಚ್ಚಿಸುವ ಬದಲು ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕು. ಆ ಮೂಲಕ ಶಾಂತಿ ಕಂಡುಕೊಳ್ಳಲು ಯತ್ನಿಸಬೇಕು ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.