
ಸಾಂಬಾ ಗಡಿಯಲ್ಲಿ ಗಸ್ತುಕಾದ ಯೋಧರು
–ಪಿಟಿಐ ಚಿತ್ರ
ಜಮ್ಮು : ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನದ ಒಳನುಸುಳುಕೋರನ ಮೇಲೆ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯೋಧರು ಗುಂಡಿನ ದಾಳಿ ನಡೆಸಿದ್ದು, ಮೃತದೇಹ ಪತ್ತೆಯಾಗಿದೆ.
‘ರಾಮಗಢ ಸೆಕ್ಟರ್‌ನ ಚೆಕ್ ಮಾಜ್ರ ಗಡಿ ಹೊರಠಾಣೆಯಲ್ಲಿ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ವೇಳೆ ನುಸುಳುಕೋರನ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಆತನ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೃತ ವ್ಯಕ್ತಿಯನ್ನು ಲಾಹೋರ್ ನಿವಾಸಿ ಮೊಹಮ್ಮದ್ ಆರೀಫ್ (61) ಎಂದು ಗುರುತಿಸಲಾಗಿದೆ.
‘ಗಡಿ ಗಸ್ತು ಕಾಯುತ್ತಿದ್ದ ವೇಳೆ ಕತ್ತಲಲ್ಲಿದ್ದ ವ್ಯಕ್ತಿಯೊಬ್ಬ ಅಡಗಿರುವುದನ್ನು ಗಮನಿಸಿದ್ದ ಯೋಧರು ಶರಣಾಗುವಂತೆ ಪದೇ ಪದೇ ಸೂಚನೆ ನೀಡಿದರು. ಆದೇಶ ಧಿಕ್ಕರಿಸಿದ ಕಾರಣ ಆರೀಫ್ ಮೇಲೆ ಗುಂಡಿನ ದಾಳಿ ನಡೆಸಲಾಯಿತು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮತ್ತೊಂದು ಪ್ರತ್ಯೇಕ ಪ್ರಕರಣದಲ್ಲಿ ವಿಶೇಷ ಕಾರ್ಯಾಚರಣಾ ತಂಡ ಹಾಗೂ ಸ್ಥಳೀಯ ಪೊಲೀಸರು ದಾಬೋಹ್ ಗ್ರಾಮದಲ್ಲಿ ಶಂಕಿತ ವ್ಯಕ್ತಿಯೊಬ್ಬರನ್ನು ಬಂಧಿಸಿದ್ದಾರೆ. ಆರೋಪಿಯ ಮೊಬೈಲ್‌ನಲ್ಲಿ ಪಾಕಿಸ್ತಾನದ ಹಲವರ ದೂರವಾಣಿ ಸಂಖ್ಯೆಯೂ ಲಭ್ಯವಾಗಿದ್ದು, ಆರೋಪಿಯನ್ನು ಸಾಂಬಾ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಮುಂದುವರಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.