ಶ್ರೀನಗರ: ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳನ್ನು ಅಂತರರಾಷ್ಟ್ರೀಯ ಪರಮಾಣು ಇಂಧನ ಸಂಸ್ಥೆಯ(ಐಎಇಎ) ಮೇಲ್ವಿಚಾರಣೆಗೆ ತರಬೇಕು. ಏಕೆಂದರೆ, ಅಂತಹ ದುಷ್ಟ ರಾಷ್ಟ್ರದಲ್ಲಿ ಅವು ಸುರಕ್ಷಿತವಾಗಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ಹೇಳಿದ್ದಾರೆ.
ಪಾಕಿಸ್ತಾನದ ಪರಮಾಣು ಬೆದರಿಕೆಯನ್ನು ಭಾರತ ಸಹಿಸುವುದಿಲ್ಲ. ಗಡಿಯಾಚೆಗಿನ ಭಯೋತ್ಪಾದನೆಯನ್ನು ಕಠಿಣವಾಗಿ ಶಿಕ್ಷಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ ಕೆಲವು ದಿನಗಳ ನಂತರ ರಕ್ಷಣಾ ಸಚಿವರ ಈ ಹೇಳಿಕೆ ಬಂದಿದೆ.
‘ಆಪರೇಷನ್ ಸಿಂಧೂರ’ದ ಬಳಿಕ ಕಣಿವೆ ರಾಜ್ಯಕ್ಕೆ ತಮ್ಮ ಮೊದಲ ಭೇಟಿಯಲ್ಲಿ ಶ್ರೀನಗರಕ್ಕೆ ಬಂದಿಳಿದ ರಾಜನಾಥ್, ಪಾಕಿಸ್ತಾನದ ಪರಮಾಣು ಬೆದರಿಕೆಗೆ ಜಗ್ಗದೇ ಭಾರತ ನಡೆಸಿದ ಕಾರ್ಯಾಚರಣೆಯು ಭಯೋತ್ಪಾದನೆಯ ವಿರುದ್ಧ ಭಾರತದ ದೃಢಸಂಕಲ್ಪವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
ಪಾಕಿಸ್ತಾನವು ಬೇಜವಾಬ್ದಾರಿಯಿಂದ ಎಷ್ಟು ಬಾರಿ ಭಾರತಕ್ಕೆ ಪರಮಾಣು ಬೆದರಿಕೆಗಳನ್ನು ಹಾಕಿದೆ ಎಂಬುದನ್ನು ಇಡೀ ಜಗತ್ತು ನೋಡಿದೆ. ಇಂದು, ಶ್ರೀನಗರದ ಭೂಮಿಯಿಂದ ಇಡೀ ಪ್ರಪಂಚದ ಮುಂದೆ ಈ ಪ್ರಶ್ನೆಯನ್ನು ಎತ್ತಲು ಬಯಸುತ್ತೇನೆ. ಅಂತಹ ಬೇಜವಾಬ್ದಾರಿ ಮತ್ತು ರಾಕ್ಷಸ ರಾಷ್ಟ್ರದ ಕೈಯಲ್ಲಿ ಪರಮಾಣು ಶಸ್ತ್ರಾಸ್ತ್ರಗಳು ಸುರಕ್ಷಿತವೇ? ಎಂದಿದ್ಧಾರೆ.
ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳನ್ನು ಐಎಇಎ(ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ) ಮೇಲ್ವಿಚಾರಣೆಗೆ ಒಳಪಡಿಸಬೇಕು ಎಂದು ನಾನು ನಂಬುತ್ತೇನೆ ಎಂದು ಅವರು ಹೇಳಿದ್ದಾರೆ.
‘ಆಪರೇಷನ್ ಸಿಂಧೂರ’ವನ್ನು ಭಾರತವು ತನ್ನ ಇತಿಹಾಸದಲ್ಲಿ ಭಯೋತ್ಪಾದನೆಯ ವಿರುದ್ಧ ತೆಗೆದುಕೊಂಡ ಅತಿದೊಡ್ಡ ಕ್ರಮ ಎಂದು ಸೈನಿಕರ ಜೊತೆಗಿನ ಸಂವಾದದಲ್ಲಿ ರಾಜನಾಥ್ ಬಣ್ಣಿಸಿದರು.
ಕಳೆದ 35-40 ವರ್ಷಗಳಿಂದ, ಭಾರತವು ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸುತ್ತಿದೆ. ಇಂದು ಭಯೋತ್ಪಾದನೆಯ ವಿರುದ್ಧ ಯಾವುದೇ ಹಂತಕ್ಕೂ ಹೋಗಬಹುದು ಎಂದು ಇಡೀ ಜಗತ್ತಿಗೆ ಭಾರತವು ಸ್ಪಷ್ಟಪಡಿಸಿದೆ ಎಂದು ಅವರು ಹೇಳಿದ್ದಾರೆ.
ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಭಾರತದ ಹಣೆಗೆ ಗುರಿ ಇಟ್ಟಿದ್ದರು, ನಮ್ಮ ಸಮಾಜದ ಸೌಹಾರ್ದತೆ ಹಾಳುಮಾಡಲು ಯತ್ನಿಸಿದ್ದರು. ನಾವು ಅವರ ಎದೆಗೇ ಹೊಡೆದೆವು ಎಂದಿದ್ದಾರೆ.
21 ವರ್ಷಗಳ ಹಿಂದೆ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾಕಿಸ್ತಾನ ಭೇಟಿಯನ್ನು ನೆನಪಿಸಿಕೊಂಡ ಸಿಂಗ್, ಇನ್ನು ಮುಂದೆ ತನ್ನ ನೆಲದಲ್ಲಿ ಭಯೋತ್ಪಾದನೆ ಪ್ರೋತ್ಸಾಹಿಸುವುದಿಲ್ಲ ಎಂದು ಪಾಕಿಸ್ತಾನ ನೀಡಿದ್ದ ಭರವಸೆಯನ್ನು ನೆನಪಿಸಿಕೊಂಡರು.
ಪಾಕಿಸ್ತಾನವು ಭಾರತಕ್ಕೆ ದ್ರೋಹ ಬಗೆದು ಈಗ ಬೆಲೆ ತೆತ್ತಿದೆ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.