ADVERTISEMENT

ಅಡಗುದಾಣಗಳಿಂದ ಭಯೋತ್ಪಾದಕರು ಹೊರಬರುವುದು ಈಗ ಅನಿವಾರ್ಯ: ಭಾರತೀಯ ಸೇನೆ

​ಪ್ರಜಾವಾಣಿ ವಾರ್ತೆ
Published 2 ಮೇ 2022, 15:42 IST
Last Updated 2 ಮೇ 2022, 15:42 IST
   

ಶ್ರೀನಗರ: ‘ಕಾಶ್ಮೀರ ಕಣಿವೆಯಲ್ಲಿ ಉಗ್ರರ ಗುಂಪಿಗೆ ಸೇರುವ ಸ್ಥಳೀಯರ ಪ್ರಮಾಣ ಕ್ರಮೇಣ ಇಳಿಕೆಯಾದ ಹಿನ್ನೆಲೆಯಲ್ಲಿ ವಿದೇಶಿ ಉಗ್ರರು ಈಗ ಅಡಗುತಾಣಗಳಿಂದ ಹೊರಬರುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ’ ಎಂದು ಭಾರತೀಯ ಸೇನೆಯ ಶ್ರೀನಗರದ ಜನರಲ್‌ ಕಮಾಡಿಂಗ್‌ ಆಫೀಸರ್‌(ಜಿಒಸಿ) ಲೆಫ್ಟಿನೆಂಟ್‌ ಗವರ್ನರ್‌ ಡಿ.ಪಿ.ಪಾಂಡೆ ತಿಳಿಸಿದರು.

ಇಲ್ಲಿನ ಸೇನೆಯ ಕಾಪ್ಸ್‌–15ರ ಪ್ರಧಾನ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಇತ್ತೀಚಿನವರೆಗೆ ವಿದೇಶಿ ಉಗ್ರರು ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಸ್ಥಳೀಯರನ್ನು ಮುಂಚೂಣಿಗೆ ಬಿಡುತ್ತಿದ್ದರು. ಆದರೆ ಈಗ ಸ್ಥಳೀಯ ಭಯೋತ್ಪಾದಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾದ ಹಿನ್ನೆಲೆಯಲ್ಲಿ ಅವರಿಗೆ ಅಡಗುತಾಣಗಳಿಂದ ಹೊರ ಬರುವುದು ಅನಿವಾರ್ಯವಾಗಿದ್ದು, ಹೀಗಾಗಿ ವಿದೇಶಿ ಉಗ್ರರ ಸಂಪರ್ಕವು ಭದ್ರತಾ ಪಡೆಗಳಿಗೆ ಗೋಚರವಾಗುತ್ತಿದೆ’ ಎಂದು ಅವರು ಹೇಳಿದರು.

‘ಪಾಕಿಸ್ತಾನ ಬೇಹುಗಾರಿಕೆ ಸಂಸ್ಥೆ ಐಎಸ್‌ಐ ಈಗ ಕಾಶ್ಮೀರದಲ್ಲಿ ಕಾರ್ಯಾಚರಣೆಗಾಗಿ ವಿದೇಶಿ ಉಗ್ರರನ್ನೇ ಅವಲಂಬಿಸಿದ್ದು, ಇಸ್ಲಾಂ ಧರ್ಮ ಭಾರತದಲ್ಲಿ ಅದರಲ್ಲೂ ಕಾಶ್ಮೀರದಲ್ಲಿಅಪಾಯದಲ್ಲಿದೆ ಎಂದು ಐಎಸ್‌ಐ ಹೇಳುತ್ತಿದೆ. ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರನ್ನು ನೇಮಿಸಿಕೊಂಡು, ತರಬೇತಿ ನೀಡಿ ಕಾರ್ಯಾಚರಣೆಗೆ ಇಳಿಸುತ್ತಿದೆ’ ಎಂದರು.

ADVERTISEMENT

ಶ್ರೀನಗರದಲ್ಲಿ ಕಳೆದ ತಿಂಗಳು ಹತ್ಯೆಯಾದ ಇಬ್ಬರು ವಿದೇಶಿ ಉಗ್ರರ ಬಳಿ ‘ಆಧಾರ್‌’ ಕಾರ್ಡ್‌ ಪತ್ತೆಯಾಗಿರುವ ಕುರಿತು ಕೇಳಿದ ಪ್ರಶ್ನೆಗೆ, ‘ ವಿದೇಶಿ ಉಗ್ರರು ‘ಆಧಾರ್‌’ಹೊಂದಿರುವುದನ್ನು ಸುಳ್ಳು ಎಂದು ಸಾಬೀತುಪಡಿಸುವುದು ಭದ್ರತಾ ಪಡೆಗಳಿಗೆ ಸವಾಲಾಗಿತ್ತು. ಈ ಸವಾಲಿಗೆ ಕ್ರಮೇಣವಾಗಿ ಪರಿಹಾರ ಕಂಡುಕೊಳ್ಳುತ್ತೇವೆ’ ಎಂದು ಹೇಳಿದರು.

ಆಫ್ಗಾನಿಸ್ತಾನದಲ್ಲಿ ಅಮೆರಿಕದ ಭದ್ರತಾಪಡೆಗಳು ಬಿಟ್ಟುಹೋದ ಸ್ಯಾಟಲೈಟ್‌ ಫೋನ್‌ ಹಾಗೂ ರಾತ್ರಿ ವೀಕ್ಷಣೆಯ ಉಪಕರಣಗಳನ್ನು ಉಗ್ರರು ಬಳಸುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ, ‘ಜಗತ್ತಿನ ಇತರೆ ದೇಶಗಳಲ್ಲಿ ಬಳಸಲಾದ ವಸ್ತುಗಳನ್ನು ಕಾಶ್ಮೀರದಲ್ಲಿ ಭಯೋತ್ಪಾದಕರು ಬಳಸುತ್ತಿರುವುದು ಕಂಡು ಬಂದಿದ್ದು, ಅವುಗಳನ್ನು ಇತ್ತೀಚಿನ ದಿನಗಳಲ್ಲಿ ವಶಪಡಿಸಿಕೊಳ್ಳಲಾಗಿದೆ. ಇದು ನಮಗೆ ದೊಡ್ಡ ಸವಾಲೇನು ಅಲ್ಲ. ನಾವು ಅದನ್ನು ಪರಿಣಾಮಕಾರಿಯಾಗಿ ಜಯಿಸಲು ಸಮರ್ಥರಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.