ADVERTISEMENT

ಜಮ್ಮು- ಕಾಶ್ಮೀರದ ಹವಾಮಾನ ವರದಿ ಪಾಕಿಸ್ತಾನ ರೇಡಿಯೊದಲ್ಲಿ ಪ್ರಸಾರ

ಪಿಟಿಐ
Published 11 ಮೇ 2020, 4:11 IST
Last Updated 11 ಮೇ 2020, 4:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಸ್ಲಾಮಾಬಾದ್‌: ಪಾಕಿಸ್ತಾನದಸರ್ಕಾರಿ ಮಾಧ್ಯಮ ಭಾನುವಾರದಿಂದ ಜಮ್ಮು ಮತ್ತು ಕಾಶ್ಮೀರದ ವಿವರವಾದ ಹವಾಮಾನ ವರದಿ ನೀಡಲು ಆರಂಭಿಸಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಹವಾಮಾನ ವರದಿ ನೀಡಲು ಭಾರತ ಆರಂಭಿಸಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.

ರೇಡಿಯೊ ಪಾಕಿಸ್ತಾನ, ಕಾಶ್ಮೀರ ಕುರಿತು ವಿಶೇಷ ವರದಿ ಮಾಡಿದ್ದು, ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಸುದ್ದಿಗಳಿಗೆಂದೇ ಸ್ಥಳ ಮೀಸಲಿಟ್ಟಿದೆ. ಸರ್ಕಾರಿ ಸುದ್ದಿವಾಹಿನಿ ಸಹ ಕಾಶ್ಮೀರ ಕುರಿತು ವಿಶೇಷ ಬುಲೆಟಿನ್‌ ಪ್ರಸಾರ ಮಾಡುತ್ತಿದೆ.

ಪಿಒಕೆಯ ಮೀರ್‌ಪುರ, ಮುಜಫ್ಫರ್‌ಬಾದ್‌ ಹಾಗೂ ಗಿಲ್ಗಿಟ್‌ನ ಹವಾಮಾನ ವರದಿ ಪ್ರಸಾರ ಮಾಡುವ ಭಾರತದ ಕ್ರಮ ಕಾನೂನಿನ ಉಲ್ಲಂಘನೆ. ಇದು ಆ ಪ್ರಾಂತ್ಯದ ಸ್ಥಾನಮಾನ ಬದಲಿಸುವ ಕ್ರಮ ಎಂದು ಪಾಕಿಸ್ತಾನ ಶುಕ್ರವಾರ ಹೇಳಿತ್ತು.

ಕಳೆದ ವರ್ಷ ಭಾರತ ಪ್ರಕಟಿಸಿದ್ದ ರಾಜಕೀಯ ಭೂಪಟಗಳಂತೆ ಈ ಕ್ರಮ ಸಹ ಕಾನೂನಿನ ಉಲ್ಲಂಘನೆ ಹಾಗೂ ವಾಸ್ತವಕ್ಕೆ ವ್ಯತಿರಿಕ್ತವಾದುದು. ಅಲ್ಲದೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಣಯಗಳಿಗೂ ವಿರುದ್ಧವಾದುದು ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆ ಹೇಳಿಕೆ ಬಿಡುಗಡೆಗೊಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.