ADVERTISEMENT

ಹಣೆಯ ಕುಂಕುಮ ಅಳಿಸಿದ ಸ್ಟಾಲಿನ್‌: ಮುಖ್ಯಮಂತ್ರಿ ಪಳನಿಸ್ವಾಮಿ ಆರೋಪ

ತಮಿಳುನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಆರೋಪ

ಪಿಟಿಐ
Published 29 ಮಾರ್ಚ್ 2021, 19:14 IST
Last Updated 29 ಮಾರ್ಚ್ 2021, 19:14 IST
ಪಳನಿಸ್ವಾಮಿ
ಪಳನಿಸ್ವಾಮಿ   

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರು ಧಾರ್ಮಿಕ ನಂಬಿಕೆ ವಿಚಾರದಲ್ಲಿ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್‌ ಅವರನ್ನು ಟೀಕಿಸಿದ್ದಾರೆ. ಎಐಎಡಿಎಂಕೆ ಸದಸ್ಯರು ನಿಜವಾದ ದೈವ ಭಕ್ತರು ಎಂದಿರುವ ಅವರು, ಸ್ಟಾಲಿನ್‌ ಅವರು ಹಣೆಗೆ ಇಟ್ಟ ಕುಂಕುಮ ಅಳಿಸಿದ್ದರು ಎನ್ನಲಾದ ಪ್ರಕರಣವನ್ನು ಉಲ್ಲೇಖಿಸಿದ್ದಾರೆ.

1989ರಲ್ಲಿ ಜಯಲಲಿತಾ ಅವರು ವಿರೋಧ ಪಕ್ಷದ ನಾಯಕಿಯಾಗಿದ್ದಾಗ ಅವರ ಮೇಲೆ ಡಿಎಂಕೆ ದಾಳಿ ನಡೆಸಿತ್ತು ಎಂಬ ಆರೋಪವನ್ನು ಮುಖ್ಯಮಂತ್ರಿ ನೆನಪು ಮಾಡಿಕೊಂಡಿದ್ದಾರೆ. ‘ಜಯಲಲಿತಾ ಅವರ ಸ್ಥಿತಿಯೇ ಹೀಗಾಗಿದ್ದರೆ ಸಾಮಾನ್ಯ ಜನರ ಪಾಡೇನು’ ಎಂದು ಡಿಎಂಕೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ನಾನು ದೇವರ ದಯದಿಂದ ಬದುಕಿದ್ದೇನೆ. ನಮಗೆ ದೇವರ ಮೇಲೆ ಭಕ್ತಿ ಇದೆ. ನಿಮ್ಮ ಹಾಗೆ ನಾವು ಹಣೆಗೆ ಹಚ್ಚಿದ ಕುಂಕುಮವನ್ನು ಅಳಿಸಿ ಹಾಕುವುದಿಲ್ಲ’ ಎಂದು ಸ್ಟಾಲಿನ್‌ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿ ಪಳನಿಸ್ವಾಮಿ ಹೇಳಿದ್ದಾರೆ.

ADVERTISEMENT

‘ಥೇವರ್‌ ಸ್ಮಾರಕಕ್ಕೆ ಹೋಗಿದ್ದಾಗ ಅಲ್ಲಿನ ಪೂಜಾರಿಗಳು ಕೊಟ್ಟ ಭಸ್ಮವನ್ನುಸ್ಟಾಲಿನ್ ಅವರು ಎಸೆದಿದ್ದಾರೆ’ ಎಂದು ಆರೋಪಿಸಿದ್ದಾರೆ. ದೇವರಲ್ಲಿ ಭಕ್ತಿ ಇರುವವರಲ್ಲಿ ಮಾತ್ರ ಮಮತೆ ಮತ್ತು ಪ್ರೀತಿಯಂತಹ ಗುಣಗಳು ಇರುತ್ತವೆ ಎಂದೂ ಅವರು ಹೇಳಿದ್ದಾರೆ.

ಪ್ರತಿಸ್ಪರ್ಧಿಗಳು, ಅದರಲ್ಲೂ ಮುಖ್ಯವಾಗಿ ಬಿಜೆಪಿ ಮುಖಂಡರು ಸ್ಟಾಲಿನ್‌ ಅವರನ್ನು ಹಿಂದೂ ವಿರೋಧಿ ಎಂದು ಬಿಂಬಿಸುತ್ತಿದ್ದಾರೆ. ವಿಚಾರವಾದದ ಜತೆಗೆ ಗುರುತಿಸಿಕೊಂಡಿರುವ ತಮ್ಮ ಪಕ್ಷಕ್ಕೆ ಹಿಂದೂ ವಿರೋಧಿ ಎಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ ಎಂದು ಸ್ಟಾಲಿನ್‌ ಪ್ರತ್ಯುತ್ತರ ನೀಡಿದ್ದಾರೆ.

ಅಧಿಕಾರಕ್ಕೆ ಬಂದರೆ ಸಿಎಎ ಇಲ್ಲ: ಸ್ಟಾಲಿನ್‌

ಜೋಲಾರ್‌ಪೇಟ್‌ (ತಮಿಳುನಾಡು) (ಪಿಟಿಐ): ತಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ತಮಿಳುನಾಡಿನಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಜಾರಿಗೆ ಅವಕಾಶ ಕೊಡುವುದಿಲ್ಲ ಎಂದು ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್‌ ಹೇಳಿದ್ದಾರೆ. ಈ ಕಾಯ್ದೆಗೆ ಸಂಸತ್ತಿನಲ್ಲಿ ಬೆಂಬಲ ನೀಡಿದ್ದ ಎಐಎಡಿಎಂಕೆಯನ್ನು ಅವರು ಟೀಕಿಸಿದ್ದಾರೆ.

ಎಐಎಡಿಎಂಕೆ ಮತ್ತು ಪಿಎಂಕೆಯ ಸದಸ್ಯರು ರಾಜ್ಯಸಭೆಯಲ್ಲಿ ಮಸೂದೆಯ ವಿರುದ್ಧ ಮತ ಹಾಕಿದ್ದರೆ ಇದು ಅಂಗೀಕಾರವೇ ಆಗುತ್ತಿರಲಿಲ್ಲ. ಹಾಗಾಗಿ, ದೇಶದಲ್ಲಿ ಅಲ್ಪಸಂಖ್ಯಾತರ ‘ವಿಧಿ’ಗೆ ಈ ಎರಡು ಪಕ್ಷಗಳನ್ನು ದೂಷಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ನಿರ್ಣಯ ಅಂಗೀಕರಿಸದ್ದಕ್ಕೆ ಪಳನಿಸ್ವಾಮಿ ನೇತೃತ್ವದ ಸರ್ಕಾರವನ್ನು ಸ್ಟಾಲಿನ್‌ ತರಾಟೆಗೆ ತೆಗೆದುಕೊಂಡಿದ್ದಾರೆ. ಪಂಜಾಬ್‌, ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳು ಇಂತಹ ನಿರ್ಣಯ ಅಂಗೀಕರಿಸಿವೆ ಎಂದು ಅವರು ಹೇಳಿದ್ದಾರೆ. ಏಪ್ರಿಲ್‌ 6ರಂದು ನಡೆಯಲಿರುವ ಚುನಾವಣೆಯಲ್ಲಿ ತಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ, ಕೃಷಿ ಕಾಯ್ದೆಗಳ ವಿರುದ್ಧ ನಿರ್ಣಯ ಅಂಗೀಕರಿಸಲಾಗುವುದು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.