ADVERTISEMENT

ಅಪ್ಪ-ಅಮ್ಮನ ಬಡಿದಾಟ: 5 ತಿಂಗಳ ಕಂದಮ್ಮ ದುರ್ಮರಣ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 7:49 IST
Last Updated 10 ಅಕ್ಟೋಬರ್ 2019, 7:49 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಅಪ್ಪ ಅಮ್ಮನ ಜಗಳದಲ್ಲಿ ಏನೂ ಅರಿಯದ ಕೂಸು ಸಾವನ್ನಪ್ಪಿದ ಆಘಾತಕಾರಿ ಘಟನೆಯೊಂದು ಪೂರ್ವ ದೆಹಲಿಯ ಕೊಂಡ್ಲಿ ಪ್ರದೇಶದಿಂದ ವರದಿಯಾಗಿದೆ.

29ರ ಹರೆಯದ ದೀಪ್ತಿ ಮತ್ತು ಆಕೆಯ ಪತಿ ಸತ್ಯಜಿತ್ (32) ಮಧ್ಯೆ ಭಾನುವಾರ ಅದ್ಯಾವುದೋ ಕಾರಣಕ್ಕೆ ಜಗಳ ಶುರುವಾಗಿ, ಹೊಡೆದಾಟದ ಹಂತಕ್ಕೆ ತಲುಪಿತ್ತು. ಸತ್ಯಜಿತ್ ಪತ್ನಿಯನ್ನು ಬಡಿಗೆ ತೆಗೆದುಕೊಂಡು ಥಳಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಆದರೆ, ಆ ಬಡಿಗೆಯಲ್ಲಿ ಮೊಳೆಯೊಂದು ಇತ್ತು. ಪತ್ನಿಗೆ ಹೊಡೆಯುವಾಗ ಈ ಮೊಳೆಯು ಐದು ತಿಂಗಳ ಪುಟ್ಟಕಂದಮ್ಮನ ತಲೆಗೆ ಬಡಿದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಮಗುವಿಗೆ ತಂದೆ, ತಾಯಿ ಇಬ್ಬರೂ ಸೇರಿಕೊಂಡು ಪ್ರಥಮ ಚಿಕಿತ್ಸೆಯನ್ನೇನೋ ಕೊಟ್ಟಿದ್ದರು. ಆದರೆ, ಮಂಗಳವಾರ ಬೆಳಿಗ್ಗೆ ಮಗು ವಾಂತಿ ಮಾಡಲಾರಂಭಿಸಿದಾಗ ಮಗುವನ್ನು ಖಾಸಗಿ ಆಸ್ಪತ್ರೆಗೆ ಸೇರಿಸಬೇಕಾಯಿತು. ಆಸ್ಪತ್ರೆಗೆ ತರುವ ಮುನ್ನವೇ ಮಗು ಕೊನೆಯುಸಿರೆಳೆದಿತ್ತು ಎಂದು ವೈದ್ಯರು ಹೇಳಿದ್ದಾರೆ.

ಮರಣೋತ್ತರ ಪರೀಕ್ಷಾ ವರದಿಯ ಪ್ರಕಾರ, ಮೊಳೆಯ ಏಟಿನಿಂದಾಗಿ ರಕ್ತ ಒಸರಿತ್ತು. ಒಂದು ದಿನದ ಬಳಿಕ ಮೆದುಳಿನಲ್ಲಿ ರಕ್ತವು ಹೆಪ್ಪುಗಟ್ಟಿ ಮಗುವಿನ ಸಾವಿಗೆ ಕಾರಣವಾಯಿತು.

ಗಾಜಿಪುರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಹಿತೆಯ 304ನೇ ವಿಧಿ ಪ್ರಕಾರ ಪ್ರಕರಣ ದಾಖಲಾಗಿದೆ. ತಂದೆ ತಲೆ ಮರೆಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.