ADVERTISEMENT

ಪಾಲಕರು ತಮ್ಮ ಕನಸುಗಳನ್ನು ಮಕ್ಕಳ ಮೇಲೆ ಹೇರುವುದು ಬೇಡ: ಪ್ರಧಾನಿ ಮೋದಿ ಸಲಹೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಏಪ್ರಿಲ್ 2022, 7:40 IST
Last Updated 1 ಏಪ್ರಿಲ್ 2022, 7:40 IST
ನರೇಂದ್ರ ಮೋದಿ
ನರೇಂದ್ರ ಮೋದಿ   

ನವದೆಹಲಿ: 10ನೇ ತರಗತಿ ಹಾಗೂ ದ್ವಿತೀಯ ಪಿಯು ಪರೀಕ್ಷೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರೊಂದಿಗೆ ‘ಪರೀಕ್ಷಾ ಪೆ ಚರ್ಚಾ’ ಕಾರ್ಯಕ್ರಮವನ್ನು ಶುಕ್ರವಾರ ನಡೆಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿನ ಆತಂಕ, ಸೋಲಿನ ಭೀತಿ ಹಾಗೂ ಪರೀಕ್ಷಾ ಒತ್ತಡವನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಸಲಹೆಗಳನ್ನು ನೀಡಿದರು. ವಿದ್ಯಾರ್ಥಿಗಳ ಪೋಷಕರಿಗೂ ಕಿವಿಮಾತುಗಳನ್ನು ಹೇಳಿದರು.

‘ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ಭಯಭೀತ ವಾತಾವರಣದಿಂದ ದೂರವಿರಬೇಕೆಂದು ನಾನು ಬಯಸುತ್ತೇನೆ. ಸ್ನೇಹಿತರನ್ನು ನಕಲು ಮಾಡುವ ಅಗತ್ಯವಿಲ್ಲ. ನೀವು ಏನು ಮಾಡಿದರೂ ಸಂಪೂರ್ಣ ಆತ್ಮವಿಶ್ವಾಸದಿಂದ ಮಾಡಬೇಕು’ ಎಂದು ಮೋದಿ ಹೇಳಿದರು.

ADVERTISEMENT

‘ಜ್ಞಾನವನ್ನು ಪಡೆಯಲು ಆನ್‌ಲೈನ್ ಶಿಕ್ಷಣ ಸಹಕಾರಿಯಾಗಿದೆ. ಆದರೆ, ಆಫ್‌ಲೈನ್ ಶಿಕ್ಷಣವು ಆ ಜ್ಞಾನವನ್ನು ಉಳಿಸಿಕೊಳ್ಳಲು ಮತ್ತು ಅದನ್ನು ಪ್ರಾಯೋಗಿಕವಾಗಿ ಅನ್ವಯಿಸಲು ಉಪಯೋಗವಾಗುತ್ತದೆ’ ಎಂದು ಮೋದಿ ತಿಳಿಸಿದರು.

‘ಆಫ್‌ಲೈನ್‌ನಲ್ಲಿ ಏನಾಗುತ್ತದೆಯೋ ಅದೇ ಆನ್‌ಲೈನ್‌ನಲ್ಲೂ ನಡೆಯುತ್ತದೆ. ನಮಗೆ ಕಲಿಕೆಯ ಮಾಧ್ಯಮವು ಸಮಸ್ಯೆಯಾಗಬಾರದು. ನಮ್ಮ ಮನಸ್ಸು ವಿಷಯದೊಳಗೆ ಮುಳುಗಿದರೆ, ಅದು ಯಾವುದೇ ವ್ಯತ್ಯಾಸವನ್ನು ಉಂಟುಮಾಡುವುದಿಲ್ಲ’ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಅಧ್ಯಯನ ಮಾಡುವಾಗ ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ನೀವು ನಿಜವಾಗಿ ಅಧ್ಯಯನದಲ್ಲಿ ತೊಡಗಿಕೊಂಡಿದ್ದೀರಾ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಸಾಮಾಜಿಕ ಮಾಧ್ಯಮದಲ್ಲಿ ರೀಲ್‌ಗಳನ್ನು ವೀಕ್ಷಿಸುತ್ತಾ ಸಮಯ ಕಳೆಯಬಾರದು’ ಎಂದು ಪ್ರಧಾನಿ ಮೋದಿ ಹೇಳಿದರು.

‘ಪಾಲಕರು ಕೆಲವೊಮ್ಮೆ ತಮ್ಮ ಮಕ್ಕಳ ಶಕ್ತಿ ಮತ್ತು ಆಸಕ್ತಿಗಳನ್ನು ಗಮನಿಸಲು ವಿಫಲರಾಗುತ್ತಾರೆ. ಪ್ರತಿ ಮಗುವೂ ಅಸಾಮಾನ್ಯ ಪ್ರತಿಭೆಯನ್ನು ಹೊಂದಿರುತ್ತದೆ. ಇದನ್ನು ಪೋಷಕರು ಮತ್ತು ಶಿಕ್ಷಕರು ಕಂಡುಕೊಳ್ಳಬೇಕಿದೆ’ ಎಂದು ಸಲಹೆ ನೀಡಿದರು.

‘ಶಿಕ್ಷಕರು ಹಾಗೂ ಪೋಷಕರ ಒತ್ತಡಕ್ಕೆ ಒಳಗಾಗಿದ್ದೇವೆ ಎಂದು ವಿದ್ಯಾರ್ಥಿಗಳು ಭಾವಿಸಬಾರದು. ಪಾಲಕರು ತಮ್ಮ ಕನಸುಗಳನ್ನು ಮಕ್ಕಳ ಮೇಲೆ ಹೇರಬಾರದು. ತಮ್ಮ ಭವಿಷ್ಯವನ್ನು ಸ್ವತಂತ್ರವಾಗಿ ನಿರ್ಧರಿಸಲು ಅವರಿಗೆ ಅವಕಾಶ ನೀಡಬೇಕು’ ಎಂದು ಮೋದಿ ತಿಳಿಸಿದರು.

ಶಾಲಾ ಕಾಲೇಜು ವಿದ್ಯಾರ್ಥಿಗಳೊಂದಿಗೆ ಪ್ರಧಾನಿ ಮೋದಿ ಅವರ ಸಂವಾದ ಕಾರ್ಯಕ್ರಮದ ಮೊದಲ ಆವೃತ್ತಿಯು 2018ರ ಫೆಬ್ರುವರಿ 16 ರಂದು ದೆಹಲಿಯ ಟಾಲ್ಕಟೋರಾ ಕ್ರೀಡಾಂಗಣದಲ್ಲಿ ಆಯೋಜನೆಯಾಗಿತ್ತು.

‘ಪರೇಶಾನಿ ಪೇ ಚರ್ಚಾ’ ಯಾವಾಗ: ಪ್ರಧಾನಿಗೆ ಎನ್‌ಸಿಪಿ ಪ್ರಶ್ನೆ

ಸಾಮಾನ್ಯ ಜನರ ಸಂಕಷ್ಟಗಳನ್ನು ಪರಿಹರಿಸಲು ‘ಪರೇಶಾನಿ ಪೇ ಚರ್ಚಾ’ ಕಾರ್ಯಕ್ರಮವನ್ನು ಯಾವಾಗ ಆಯೋಜಿಸುತ್ತೀರಿ ಎಂದು ಪ್ರಧಾನಿ ಮೋದಿಗೆ ಎನ್‌ಸಿಪಿ ಪ್ರಶ್ನಿಸಿದೆ.

ಈ ವಿಚಾರವಾಗಿ ಟ್ವೀಟ್‌ ಮಾಡಿರುವ ಎನ್‌ಸಿಪಿ ವಕ್ತಾರ ಕ್ಲೈಡ್ ಕ್ರಾಸ್ಟೊ, 'ಪರೀಕ್ಷೆಯ ಅವಧಿಯಲ್ಲಿ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗುತ್ತಾರೆ. ಒತ್ತಡವನ್ನು ದೂರಮಾಡಲು ಅವರೊಂದಿಗೆ ಸಂವಾದ ನಡೆಸಿದ್ದಕ್ಕಾಗಿ ಪ್ರಧಾನ ಮಂತ್ರಿಯವರಿಗೆ ಧನ್ಯವಾದ ಹೇಳುತ್ತೇವೆ. ಆದರೆ, ವಿದ್ಯಾರ್ಥಿಗಳ ಪೋಷಕರು ಹಾಗೂ ಸಾಮಾನ್ಯ ಜನರ ಸಂಕಷ್ಟಗಳನ್ನು ಪರಿಹರಿಸಲು ‘ಪರೇಶಾನಿ ಪೇ ಚರ್ಚಾ’ ಕಾರ್ಯಕ್ರಮವನ್ನು ಯಾವಾಗ ನಡೆಸುತ್ತೀರಿ’ ಎಂದು ಕ್ರಾಸ್ಟೊ ಪ್ರಶ್ನಿಸಿದ್ದಾರೆ.

ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಆತಂಕ ಪಡುವ ಹಂತಕ್ಕೆ ನಿರುದ್ಯೋಗ ಬಂದು ತಲುಪಿದೆ. ಕೆಲ ಸೆಲೆಬ್ರಿಟಿಗಳು ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮವನ್ನು ನೋಡುವಂತೆ ಸಲಹೆ ನೀಡುತ್ತಿದ್ದಾರೆ. ಬೆಲೆ ಏರಿಕೆಯಿಂದ ಜನಸಾಮಾನ್ಯರು ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಅವರು ಎಂದಾದರೂ ಯೋಚಿಸಿದ್ದೀರಾ ಎಂದು ಕ್ರಾಸ್ಟೊ ಕೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.