ADVERTISEMENT

ವಿದೇಶಿ ಹಸ್ತಕ್ಷೇಪಕ್ಕೆ ಕಡಿವಾಣ ಹಾಕಿ: ಟ್ವಿಟರ್‌ಗೆ ಸೂಚನೆ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2019, 18:23 IST
Last Updated 25 ಫೆಬ್ರುವರಿ 2019, 18:23 IST
   

ನವದೆಹಲಿ:2016ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಆದಂತೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ವಿದೇಶಿ ಶಕ್ತಿಗಳ ಪ್ರಭಾವ ಉಂಟಾಗಬಾರದು. ಅದಕ್ಕೆ ಬೇಕಾದ ಎಚ್ಚರಿಕೆ ವಹಿಸಿ ಎಂದು ಟ್ವಿಟರ್‌ ಸಂಸ್ಥೆಗೆ ಮಾಹಿತಿ ತಂತ್ರಜ್ಞಾನ ಸಂಸದೀಯ ಸಮಿತಿಯು ಸೂಚಿಸಿದೆ.

ಚುನಾವಣಾ ಆಯೋಗದ ಜತೆಗೆ ಹೆಚ್ಚು ಒಡನಾಟ ಇರಿಸಿಕೊಳ್ಳಬೇಕು ಮತ್ತು ಸಮಸ್ಯೆಗಳನ್ನು ತಕ್ಷಣವೇ ಪರಿಹರಿಸಬೇಕು ಎಂದೂ ಸಂಸದೀಯ ಸಮಿತಿಯ ಅಧ್ಯಕ್ಷ ಅನುರಾಗ್‌ ಠಾಕೂರ್‌ ಹೇಳಿದ್ದಾರೆ. ಆಯೋಗದ ಜತೆಗೆ ನಿಕಟವಾಗಿ ಕೆಲಸ ಮಾಡಲು ನೋಡಲ್‌ ಅಧಿಕಾರಿಯೊಬ್ಬರನ್ನು ನೇಮಿಸಲು ಟ್ವಿಟರ್‌ ಒಪ್ಪಿಕೊಂಡಿದೆ.

ಟ್ವಿಟರ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಾಕ್‌ ಡೋರ್ಸಿ ಅವರ ಬದಲಿಗೆ ಸಂಸ್ಥೆಯ ಸಾರ್ವಜನಿಕ ನೀತಿ ವಿಭಾಗದ ಉಪಾಧ್ಯಕ್ಷ ಕಾಲಿನ್‌ ಕ್ರಾವೆಲ್‌ ಸಭೆಗೆ ಹಾಜರಾಗಿದ್ದರು. ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಡೋರ್ಸಿ ಬರೆದ ಪತ್ರವನ್ನು ಠಾಕೂರ್‌ ಓದಿದರು.

ADVERTISEMENT

ಟ್ವಿಟರ್‌ಗೆ ನೀಡಲಾಗಿರುವ ಪ್ರಶ್ನೆಗಳಿಗೆ ಮುಂದಿನ ಹತ್ತು ದಿನಗಳಲ್ಲಿ ಉತ್ತರ ನೀಡುವಂತೆ ಸಮಿತಿ ಸೂಚಿಸಿದೆ. ‘ಸಾಮಾಜಿಕ ಜಾಲತಾಣಗಳು/ಆನ್‌ಲೈನ್‌ ಮಾಧ್ಯಮಗಳಲ್ಲಿ ಜನರ ಹಕ್ಕುಗಳ ರಕ್ಷಣೆ’ ಬಗ್ಗೆ ಸಮಿತಿಯು ವಿಚಾರಣೆ ನಡೆಸುತ್ತಿದೆ. ಮಾರ್ಚ್‌ 6ರಂದು ನಡೆಯಲಿರುವ ಸಭೆಗೆ ಹಾಜರಾಗುವಂತೆ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಮತ್ತು ಇನ್‌ಸ್ಟಾಗ್ರಾಂ ಸಂಸ್ಥೆಗಳ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದೇ 11ರಂದು ಸಭೆಗೆ ಹಾಜರಾಗುವಂತೆ ಟ್ವಿಟರ್‌ ಸಿಇಒ ಡೋರ್ಸಿ ಅವರಿಗೆ ಸೂಚಿಸಲಾಗಿತ್ತು. ಆದರೆ, ಸಾಕಷ್ಟು ಮುಂಚಿತವಾಗಿ ನೋಟಿಸ್‌ ನೀಡದ ಕಾರಣ ಸಭೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಅವರು ಪ್ರತಿಕ್ರಿಯೆ ನೀಡಿದ್ದರು. ಅಧಿಕಾರಿಗಳನ್ನು ಕಳುಹಿಸುವುದಾಗಿ ತಿಳಿಸಿದ್ದರು. ಕಿರಿಯ ಅಧಿಕಾರಿಗಳ ಜತೆ ಸಮಾಲೋಚನೆ ಸಾಧ್ಯವಿಲ್ಲ ಎಂದು ಸಮಿತಿಯು ಸಭೆಯನ್ನು 25ಕ್ಕೆ ಮುಂದೂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.